ಹೈದರಾಬಾದ್: ಕೊರೊನಾ ಎರಡನೇ ಅಲೆ ಹೆಚ್ಚಾಗಿ ಲಾಕ್‌ಡೌನ್ ಇಲ್ಲವಾಗಿದ್ದಿದ್ದರೆ, ಇಷ್ಟರಲ್ಲಿ ಸೂರಪ್ಪ ಬಾಬು ನಿರ್ಮಾಣದ ಮತ್ತು ಸುದೀಪ್ ಅಭಿನಯದ 'ಕೋಟಿಗೊಬ್ಬ -3 ' ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ. ಲಾಕ್‌ಡೌನ್ ಯಾವಾಗ ಮುಗಿದು, ಚಿತ್ರಪ್ರದರ್ಶನ ಪ್ರಾರಂಭವಾಗಬಹುದು ಎಂದು ಯಾರಿಗೂ ಗೊತ್ತಾಗದಂತಾಗಿದೆ.
ಈ ಮಧ್ಯೆ, 'ಕೋಟಿಗೊಬ್ಬ-3' ಚಿತ್ರಕ್ಕೆ ಓಟಿಟಿಯಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆಯಂತೆ. ಕಳೆದ ಲಾಕ್‌ಡೌನ್ ಸಮಯದಲ್ಲೇ, ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಬೇಡಿಕೆಗಳು ಬರುತ್ತಿವೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿಕೊಂಡಿದ್ದರು. ಆದರೆ, ಅವರು ಚಿತ್ರಮಂದಿರಗಳಲ್ಲೇ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬ ಕಾರಣಕ್ಕೆ ಚಿತ್ರವನ್ನು ಯಾರಿಗೂ ಕೊಟ್ಟಿರಲಿಲ್ಲ. ಒಂದಿಷ್ಟು ಸಮಯ ಕಾದು ನೋಡುವುದಾಗಿ ಹೇಳಿದ್ದರು. ಆದರೆ, ಇದೀಗ ಎರಡನೆಯ ಬಾರಿಗೆ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ, ಮತ್ತೊಮ್ಮೆ ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ತಮ್ಮ ರೇಟ್‌ಗೆ ಬರದಿದ್ದರೆ, ಹಕ್ಕುಗಳನ್ನು ಕೊಡುವುದಿಲ್ಲ ಎಂದು ಬಾಬು ಹೇಳಿಕೊಂಡಿದ್ದಾರೆ.
ಇಷ್ಟಕ್ಕೂ, ಸೂರಪ್ಪ ಬಾಬು ಅವರ ಡಿಮ್ಯಾಂಡ್ ಏನು?
'ಕೋಟಿಗೊಬ್ಬ-3' ಚಿತ್ರದ ಡಿಜಿಟಲ್ ಹಕ್ಕುಗಳ ಮಾರಾಟ ಮಾಡುವುದಕ್ಕೆ ಅವರು ಫಿಕ್ಸ್ ಮಾಡಿರುವ ಮೊತ್ತವೇನು ಎಂಬ ಪ್ರಶ್ನೆಗಳು ಸಹಜ. ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಫಿಕ್ಸ್ ಮಾಡಿರುವ ಮೊತ್ತ 35 ಕೋಟಿ. ಈ ಮೊತ್ತ ಕೊಡುವ ಓಟಿಟಿಯವರಿಗೆ ನಿರ್ಮಾಪಕರು ಹಕ್ಕುಗಳನ್ನು ಮಾರಾಟ ಮಾಡ್ತಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿವೆ.
ಇನ್ನು, ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಅವರು ಕನ್ನಡಕ್ಕೆ ಕೊಟ್ಟಿದ್ದು, ಮೂಲಗಳ ಪ್ರಕಾರ ಅದರಿಂದ ಎಂಟೂವರೆ ಕೋಟಿ ಸಿಕ್ಕಿದೆಯಂತೆ. ತೆಲುಗು ಸೇರಿದಂತೆ ಬೇರೆ ಭಾಷೆಗಳ ಡಬ್ಬಿಂಗ್ ಹಕ್ಕುಗಳಿಂದ 10 ಕೋಟಿ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.