ಪ್ರತಿಯೊಬ್ಬರಿಗೂ ದಾನ ಮಾಡುವ ಹೃದಯ ವೈಶಾಲ್ಯತೆ ಇರುವುದಿಲ್ಲ. ನಮಗೆ ಇಲ್ಲದಿದ್ದರೂ ಪರವಾಗಿಲ್ಲ ನೊಂದವರಿಗೆ ಮೊದಲು ಸಹಾಯ ಮಾಡೋಣ ಎಂದುಕೊಳ್ಳುವ ಮನಸ್ಸು ಕೆಲವೇ ಕೆಲವರಲ್ಲಿ ಇರುತ್ತದೆ. ಮತ್ತೆ ಕೆಲವರು ದೇವರು ನಮಗೆ ನೀಡಿರುವುದೇ ಇಲ್ಲದಿರುವವರಿಗೆ ಸಹಾಯ ಮಾಡಲು ಎಂಬ ಮನೋಭಾವವುಳ್ಳವರು.
ಅಂತಹ ವ್ಯಕ್ತಿಗಳಲ್ಲಿ ನಿರ್ಮಾಪಕ ಮಹೇಂದ್ರ ಮುನೋತ್ ಕೂಡಾ ಒಬ್ಬರು. ಪರಭಾಷೆಯವರಾಗಿ ಕನ್ನಡ ನಾಡಿನಲ್ಲಿ ಕಲಿತು, ಇಲ್ಲಿ ನೂರಾರು ವ್ಯಕ್ತಿಗಳಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಮಹೇಂದ್ರ. ಇದರೊಂದಿಗೆ ಗೋ ರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇತ್ತೀಚೆಗೆ ಮಂಡ್ಯ ಬಳಿ ಇರುವ ಗೋಶಾಲೆಯೊಂದಕ್ಕೆ ಭಾರೀ ಮೊತ್ತದ ಹಣವನ್ನು ದಾನವಾಗಿ ನೀಡಿದ್ದಾರೆ. ತಮ್ಮ ತಂದೆ ದಿವಂಗತ ಮೋತಿಲಾಲ್ ಮುನೋತ್ ಅವರ 8 ನೇ ಪುಣ್ಯತಿಥಿ ಅಂಗವಾಗಿ 22 ಲಕ್ಷ ರೂಪಾಯಿ ದೇಣಿಗೆಯನ್ನು ಚೈತ್ರ ಗೋಶಾಲೆಗೆ ನೀಡಿದ್ದಾರೆ. ಇದರಿಂದ ನೂರಾರು ಹಸುಗಳ ಸಂರಕ್ಷಣೆ ಆಗುತ್ತದೆ ಎಂಬ ಮನೋಭಾವ ಅವರದ್ದು.
ಕನ್ನಡದಲ್ಲಿ ಮೂರು ಸಿನಿಮಾಗಳನ್ನು ನಿರ್ಮಿಸಿರುವುದಲ್ಲದೇ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಕೂಡಾ ಮಾಡಿದ್ದಾರೆ ಮಹೇಂದ್ರ. ಇವರು ಅಪಾರ ದೇಶಪ್ರೇಮಿ ಕೂಡಾ. ಅಷ್ಟೇ ಅಲ್ಲ ಕನ್ನಡ ಭಾಷೆ ಬಗ್ಗೆ ಅವರು ತಮ್ಮ ಪ್ರೀತಿಯನ್ನು ಅನೇಕ ಕಡೆ ತೋರುತ್ತಾ ಬಂದಿದ್ದಾರೆ. ಮಹೇಂದ್ರ ಅವರು ಜೀವನದಲ್ಲಿ ಉತ್ತಮ ಸಿದ್ಧಾಂತಗಳನ್ನು ಹೊಂದಿದ್ದಾರೆ. ಇತರರು ಇವರನ್ನು ನೋಡಿ ಕಲಿಯುವಂತೆ ಜೀವನ ಸಾಗಿಸುತ್ತಿದ್ದಾರೆ.