ಹೂವಿನ ಹುಡುಗಿ, ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 42ನೇ ವಸಂತಕ್ಕೆ ಕಾಲಿಟ್ಟ ದೇವಕಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ನಿನ್ನೆ ರಾತ್ರಿ 12 ಗಂಟೆಗೆ ಫ್ಯಾಮಿಲಿ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ ಪ್ರಿಯಾಂಕ, ಇಂದು ಅಭಿಮಾನಿಗಳ ಜೊತೆ ಕೂಡಾ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಉಪೇಂದ್ರ ಅವರೇ ಮಡದಿಗೆ ಮೊದಲ ಶುಭಾಶಯ ಕೋರಿದ್ದಾರೆ. ಪ್ರಿಯಾಂಕ ಹುಟ್ಟುಹಬ್ಬದ ಗಿಫ್ಟ್ ಆಗಿ ಅವರ ಅಭಿನಯದ 'ಉಗ್ರಾವತಾರ' ಹಾಗೂ 'ಸೆಂಟ್ಮಾರ್ಕ್ಸ್ ರೋಡ್' 2 ಸಿನಿಮಾಗಳ ಪೋಸ್ಟರ್ ಹಾಗೂ ಫಸ್ಟ್ಲುಕನ್ನು ಉಪೇಂದ್ರ ಅವರೇ ಲಾಂಚ್ ಮಾಡಿ ಪತ್ನಿಗೆ ಸಾಥ್ ನೀಡಿದ್ದಾರೆ. 'ಉಗ್ರಾವತಾರ' ಚಿತ್ರಕ್ಕಾಗಿ ಪ್ರಿಯಾಂಕ ವರ್ಕೌಟ್ ಮಾಡುತ್ತಿದ್ದು ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಮತ್ತೊಂದು ಸಿನಿಮಾ 'ಸೆಂಟ್ಮಾರ್ಕ್ಸ್ ರೋಡ್' ಈಗಾಗಲೇ ಶೂಟಿಂಗ್ ಮುಗಿಸಿದ್ದು ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಬೆಳಗಿನಿಂದಲೇ ಉಪೇಂದ್ರ ಮನೆ ಮುಂದೆ ಜಮಾಯಿಸಿರುವ ಅಭಿಮಾನಿಗಳು ಪ್ರಿಯಾಂಕ ಕೈಯ್ಯಲ್ಲಿ ಕೇಕ್ ಕಟ್ ಮಾಡಿಸಿ ಶುಭ ಕೋರಿದ್ದಾರೆ. ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳಿಗೆ ಪ್ರಿಯಾಂಕ ಧನ್ಯವಾದ ತಿಳಿಸಿದ್ದಾರೆ.