ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕ ಶಿವರಸನ್ ಹಾಗೂ ತಂಡದ ಕುರಿತಾಗಿ 2006 ರಲ್ಲಿ 'ಸೈನೈಡ್' ಸಿನಿಮಾ ಕನ್ನಡದಲ್ಲಿ ತಯಾರಾಗಿತ್ತು. ಎ.ಎಂ.ಆರ್. ರಮೇಶ್ ಪ್ರಥಮ ನಿರ್ದೇಶನದ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡಾ ಲಭಿಸಿತ್ತು. ಈಗ ಇದೇ ಹೆಸರಿನಲ್ಲಿ ಪ್ಯಾನ್ ಇಂಡಿಯಾ ಚಿತ್ರವೊಂದು ತಯಾರಾಗುತ್ತಿದೆ.
ಕುಖ್ಯಾತ ಕ್ರಿಮಿನಲ್ ಸೈನೈಡ್ ಮೋಹನ್ ಕುರಿತಾದ ಚಿತ್ರ ಇದು. ದೈಹಿಕ ಶಿಕ್ಷಣ ಶಿಕ್ಷಕನಾದ ಮೋಹನ್, ಹೆಣ್ಣು ಮಕ್ಕಳನ್ನು ಪರಿಚಯ ಮಾಡಿಕೊಂಡು ಅವರು ಆತ್ಮೀಯರಾದಾಗ ಸೈನೈಡ್ ಮಿಶ್ರಿತ ಮಾತ್ರೆಯನ್ನು ನೀಡಿ ಅವರ ಹಣ, ಆಭರಣ ಲೂಟಿ ಮಾಡಿ ಹತ್ಯಾಚಾರ ಮಾಡುತ್ತಿದ್ದು ನಂತರ ಪೊಲೀಸರ ಅತಿಥಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾದವನು. ಇದೀಗ ಈತನ ಬಗ್ಗೆ ಸಿನಿಮಾ ಬರಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಈ ಚಿತ್ರದಲ್ಲಿ ಐಜಿ ಆಗಿ ನಟಿಸುತ್ತಿದ್ದು ಮತ್ತೊಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ರಾಜೇಶ್. ಟಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ರೋಹಿಣಿ, ಚಿತ್ತರಂಜನ್ ಗಿರಿ, ತಣಿಕೆಲ್ಲ ಭರಣಿ, ಯಶ್ಪಾಲ್ ಶರ್ಮ, ರಾಮ್ ಗೋಪಾಲ್ ಬಜಾಜ್, ಶಿಜು, ಶಾಜು, ಶ್ರೀಮನ್, ಸಮೀರ್, ಸಂಜು, ಶಿವರಾಮ್, ರಾಜು ಬಜಾಜ್, ರಿಂಜು ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಮಿಡಲ್ ಈಸ್ಟ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿ ಅನಿವಾಸಿ ಭಾರತೀಯ, ಖ್ಯಾತ ಬ್ಯುಸ್ನೆಸ್ ಮ್ಯಾನ್ ಪ್ರದೀಪ್ ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಂಗಳೂರು, ಹೈದರಾಬಾದ್, ಗೋವಾ, ಮಡಿಕೇರಿ, ಕೊಡಗು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಕಮಲ ಹಾಸನ್ ಅಭಿನಯದ 'ವಿಶ್ವರೂಪಮ್' ಹಾಗೂ ಉತ್ತಮ ವಿಲನ್ ಛಾಯಾಗ್ರಾಹಕ ಸಾದತ್ ಸೈನುದ್ದೀನ್ ಛಾಯಾಗ್ರಹಣ, ಜಾರ್ಜ್ ಜೋಸೆಫ್ ಸಂಗೀತ, ಗೋಕುಲ್ ದಾಸ್ ಕಲಾ ನಿರ್ದೇಶನ ಹಾಗೂ ಶಶಿ ಕುಮಾರ್ ಸಂಕಲನ ಈ 'ಸೈನೈಡ್' ಚಿತ್ರಕ್ಕಿದೆ. 2021 ರಿಂದ ಚಿತ್ರೀಕರಣ ಆರಂಭವಾಗಲಿದೆ.