ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಷಯ ಅಂದ್ರೆ ಡ್ರೋನ್ ಪ್ರತಾಪ್. ಡ್ರೋನ್ ಕಂಡು ಹಿಡಿದು, ವಿದೇಶಗಳಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ ಎಂದು ಪ್ರತಾಪ್ ಕಾಗೆ ಹಾರಿಸಿದ್ದಾನೆ ಎಂದು ಸಾಕಷ್ಟು ಟ್ರೋಲ್ ಮಾಡಲಾಗಿತ್ತು.
ಸದ್ಯ ಪ್ರತಾಪನ ಪುರಾಣ ಕೆದಕಿದಂತೆ ಬಹಳ ಇಂಟ್ರೆಸ್ಟಿಂಗ್ ವಿಷಯಗಳು ಹೊರ ಬರ್ತಿವೆ. ಅದರಲ್ಲಿ ಪ್ರಮುಖ ವಿಷಯ ಅಂದ್ರೆ ಆತನ ಜೀವನದ ಕತೆ ಕೇಳಿ ಸ್ಯಾಂಡಲ್ವುಡ್ ನಿರ್ದೇಶಕ ರಾಜಶೇಖರ್ ಮೆಚ್ಚಿಕೊಂಡು ಸಿನಿಮಾ ಮಾಡಲು ಕೈ ಹಾಕಿ ಸ್ವಲ್ಪ ಹಣವನ್ನು ಕಳೆದುಕೊಂಡಿದ್ದು.
ವಿಶೇಷ ಅಂದ್ರೆ 'ಡ್ರೋನ್ ಪ್ರತಾಪ್' ಟೈಟಲ್‌ನಲ್ಲೇ ಪ್ರತಾಪ್ ಪರಮಾವತಾರದ ದರ್ಶನ ಮಾಡಿಸಲು ಹೊರಟಿದ್ದ ನಿರ್ದೇಶಕರು ಬಹುತೇಕ ಎಲ್ಲಾ ಮಾತುಕತೆ ಮುಗಿಸಿದ್ದರಂತೆ. ಅಲ್ಲದೆ ಪ್ರತಾಪನ ಕತೆಗೆ 2 ಲಕ್ಷ ರೂ. ಮುಂಗಡ ಹಣ ಹಾಗು ಲಾಭದಲ್ಲಿ 20% ಪಾಲು ನೀಡುವುದಾಗಿ ಆತನ ಜೊತೆ ಅಗ್ರಿಮೆಂಟ್ ಮಾಡಿಕೊಂಡು, ಒಂದು ಲಕ್ಷ ಹಣ ಮುಂಗಡ ನೀಡಿದ್ದಾರೆ.
ಅಮೃತ ವಾಣಿ, ಬರ್ಫಿ, ಸಿನಿಮಾ ನಿರ್ದೇಶನ ಮಾಡಿದ ಅನುಭವ ಇರುವ ನಿರ್ದೇಶಕ ರಾಜ್ಶೇಖರ್ ಅವರಿಗೆ ಅಣ್ಣನ ಮೂಲಕ ಪ್ರತಾಪ್ ಪರಿಚಯವಾಗಿತ್ತು. ಎಲ್ಲರಂತೆ ಡ್ರೋನ್ ಕತೆ ಕೇಳಿ ಸ್ಫೂರ್ತಿ ಪಡೆದಿದ್ದರಂತೆ. ಅದಕ್ಕಾಗಿ ಚಿತ್ರಕ್ಕೆ ಕೈ ಹಾಕಿದ್ರಂತೆ. ಒಂದು ವೇಳೆ ಕೊರೊನಾ ಲಾಕ್‌ಡೌನ್ ಇಲ್ಲದಿದ್ರೆ ಇಷ್ಟೊತ್ತಿಗೆ ಈ ಸಿನಿಮಾ ಮುಗಿಸ್ತಿದ್ದೆ ಎನ್ನುವ ನಿರ್ದೇಶಕರು, ಜಸ್ಟ್ ಮಿಸ್ ಆದೆ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.
ಸುಮಾರು ನಾಲ್ಕರಿಂದ ಐದು ಕೋಟಿ ಬಜೆಟ್ನಲ್ಲಿ ನಾನು ಈ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಅಲ್ಲದೆ ಫ್ರಾನ್ಸ್, ಜಪಾನ್ಗೆ ಹೋಗಿ ಶೂಟಿಂಗ್ ಮಾಡಬೇಕು ಎಂದು ಎಲ್ಲಾ ರೀತಿಯ ಫ್ರಿಪರೇಷನ್ ಮಾಡಿಕೊಂಡು, ಪಾತ್ರಗಳ ಆಯ್ಕೆ ಮಾಡುತ್ತಿದ್ದೆ. ಅಲ್ಲದೆ ಪ್ರತಾಪ್ ಪಾತ್ರಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ಪ್ರದೀಪ್ ಪಾತ್ರ ಮಾಡಿದ್ದ ಹುಡುಗನನ್ನು ಸಜೆಸ್ಟ್ ಮಾಡಿದ್ದ.
ಪಾತ್ರಗಳ ಅಯ್ಕೆಯಲ್ಲೂ ನಮಗೆ ಸಲಹೆ ಕೊಟ್ಟಿದ್ದ. ಅದೃಷ್ಟವಶಾತ್ ಸಿನಿಮಾ ಸೆಟ್ಟೇರಲಿಲ್ಲ, ಅಷ್ಟರಲ್ಲಿ ಪ್ರತಾಪ್ ಬಗ್ಗೆ ಕೇಳಿ, ಬಂದಿರುವ ವಿಷಯ ನೋಡಿ ಶಾಕ್ ಅಯ್ತು ಎಂದು ನಿರ್ದೇಶಕ ನಿರ್ಮಾಪಕರ ರಾಜಶೇಖರ್ ಹೇಳಿದರು. ಅಲ್ಲದೆ ಈಗಾಗಲೇ ನಾನು ಕೊಟ್ಟಿದ್ದ ಹಣವನ್ನು ಮರಳಿ ಪಡೆಯುತ್ತೇನೆ. ಆದ್ರೆ ಸದ್ಯಕ್ಕೆ ಪ್ರತಾಪ್ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ರಾಜಶೇಖರ್ ಹೇಳಿದ್ದಾರೆ.