ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಮಾಡಿರುವ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ, ಈಗ ನಟಿ ರಾಗಿಣಿ ದ್ವಿವೇದಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಡ್ರಗ್ಸ್ ಮಾಫಿಯಾ ವಿಷಯವಾಗಿ ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ, ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್ವುಡ್ನ ಕೆಲ ನಟ-ನಟಿಯರು ಡ್ರಗ್ಸ್ ತೆಗದುಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದ ಸಂಬರಗಿ ಇಂದು ಮಾಧ್ಯಮಗೋಷ್ಟಿ ನಡೆಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗ ನಟಿ ರಾಗಿಣಿ ದ್ವಿವೇದಿ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಸದ್ಯ ಡ್ರಗ್ಸ್ ಜಾಲದಲ್ಲಿ ರಾಗಿಣಿ ದ್ವಿವೇದಿ ಹೆಸರು ಕೇಳಿ ಬಂದ ಕಾರಣ, ಸಿಸಿಬಿ ಪೊಲೀಸರು ತುಪ್ಪದ ಬೆಡಗಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪ್ರಶಾಂತ್ ಸಂಬರಗಿ ಅವರು, ರಾಗಿಣಿ ದ್ವಿವೇದಿ ಆರ್ಟಿಓ ಅಧಿಕಾರಿ ರವಿಶಂಕರ್ ಜೊತೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ನಡೆಯುವ ಪಾರ್ಟಿಯಲ್ಲಿ ಜೊತೆಗೆ ಓಡಾಡೋದನ್ನು ನೋಡಿದ್ದೇನೆ. ಅವರಿಬ್ಬರೂ ಮದುವೆ ಆಗಲು ತಯಾರಿ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಕಳೆದ ವರ್ಷ ರಾಗಿಣಿ ದ್ವಿವೇದಿ ಬಾಯ್ಫ್ರೆಂಡ್ ಅಂತಾ ಕರೆಸಿಕೊಂಡಿದ್ದ ಶಿವಪ್ರಕಾಶ್, ರಾಗಿಣಿ ವಿಷಯವಾಗಿ ರವಿಶಂಕರ್ ಮೇಲೆ ಹಲ್ಲೆ ಮಾಡಿದ್ರು. ಆಗ ರಾಗಿಣಿ ಬಾಯ್ಫ್ರೆಂಡ್ಗಳ ಕಿತ್ತಾಟ ಸುದ್ದಿಯಾಗಿತ್ತು. ರಾಗಿಣಿ ದ್ವಿವೇದಿ, ರವಿಶಂಕರ್ ಜೊತೆ ಮದುವೆ ಆಗಲು ಸಿದ್ಧವಾಗಿದ್ದರು ಎಂದು ಸಂಬರಗಿ ಆರೋಪಿಸಿದ್ದಾರೆ. ಈ ಸಮಯದಲ್ಲಿ ಪ್ರಶಾಂತ್ ಸಂಬರಗಿ ಹೇಳಿಕೆ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಮುಳುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.