ಕನ್ನಡದ ಜನಪ್ರಿಯ ನಿರ್ದೇಶಕ ಪ್ರಶಾಂತ್ ನೀಲ್, ಸದ್ದಿಲ್ಲದೆ ಶುಕ್ರವಾರದಿಂದ ತೆಲಂಗಾಣದಲ್ಲಿ ಪ್ರಭಾಸ್ ಅಭಿನಯದ `ಸಲಾರ್' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈಗಾಗಲೇ ಪ್ರಭಾಸ್ ಅಭಿನಯದಲ್ಲಿ ಒಂದಿಷ್ಟು ಮಹತ್ವದ ದೃಶ್ಯ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಬಹುಶಃ ಅವರು ಒಂದು ಚಿತ್ರ ಮುಗಿಸಿ, ಕೆಲವೇ ದಿನಗಳ ಅಂತರದಲ್ಲಿ ಇನ್ನೊಂದು ಚಿತ್ರ ಪ್ರಾರಂಭಿಸಿದ್ದು ಇದೇ ಮೊದಲಿರಬೇಕು.
ಪ್ರಶಾಂತ್ ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕವೇ ಆಗಿದೆ. 2011ರಲ್ಲಿ ಅವರ ನಿರ್ದೇಶನದ ಮೊದಲ ಚಿತ್ರ ಪ್ರಾರಂಭವಾಯಿತು. ಮುರಳಿ ಅಭಿನಯದ ಈ ಚಿತ್ರ `ಉಗ್ರಂ' ಎಂಬ ಹೆಸರಿನಲ್ಲಿ 2014ಕ್ಕೆ ಬಿಡುಗಡೆಯಾಯಿತು. ಸಾಕಷ್ಟು ಸಮಸ್ಯೆಗಳಿಂದ ಮೂರು ವರ್ಷಗಳ ಕಾಲ ವಿಳಂಬವಾಗಿ ಬಿಡುಗಡೆಯಾದ ಈ ಚಿತ್ರ, ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತಾದ್ರೂ, ಪ್ರಶಾಂತ್ ಇನ್ನೊಂದು ಚಿತ್ರ ಘೋಷಿಸಿದ್ದು 2016ರಲ್ಲಿ. ಅದೇ `ಕೆಜಿಎಫ್'.
ಇದನ್ನೂ ಓದಿ : 'ಕಬ್ಜ' ಸಿನಿಮಾ ಸುದೀಪ್ ಒಪ್ಪಿದ್ದೇಕೆ ಗೊತ್ತಾ?
ಈ ಚಿತ್ರದ ಮೊದಲ ಭಾಗ 2018ರಲ್ಲಿ ಬಿಡುಗಡೆಯಾದ್ರೂ, ಎರಡನೇ ಭಾಗದ ಚಿತ್ರೀಕರಣ ಶುರುವಾಗಿದ್ದು ಎಂಟು ತಿಂಗಳ ನಂತರವೇ.`ಕೆಜಿಎಫ್ 2' ಚಿತ್ರದ ಚಿತ್ರೀಕರಣ ಮುಗಿದಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈಗಾಗಲೇ ಜುಲೈ 16ಕ್ಕೆ ಜಗತ್ತಿನಾದ್ಯಂತ ಚಿತ್ರ ಬಿಡುಗಡೆಯಾಗಲಿದೆ ಎಂದು ಪ್ರಶಾಂತ್ ನೀಲ್ ಘೋಷಿಸಿದ್ದಾರೆ.
ಈ ಚಿತ್ರದ ಚಿತ್ರೀಕರಣ ಮುಗಿದು ಒಂದು ತಿಂಗಳಷ್ಟೇ ಆಗಿದೆ. 2020ರ ಡಿಸೆಂಬರ್‌ನ ಕೊನೆಯ ವಾರದಲ್ಲಿ `ಕೆಜಿಎಫ್ 2' ಚಿತ್ರದ ಚಿತ್ರೀಕರಣ ಮುಗಿದಿತ್ತು. ಅದಾಗಿ ಒಂದು ತಿಂಗಳಲ್ಲಿ ಅವರು ಇನ್ನೊಂದು ಚಿತ್ರ ಪ್ರಾರಂಭಿಸಿದ್ದಾರೆ.
ಸಾಮಾನ್ಯವಾಗಿ ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಸಾಕಷ್ಟು ಗ್ಯಾಪ್ ತೆಗೆದುಕೊಳ್ಳುವ ಪ್ರಶಾಂತ್, ಈ ಬಾರಿ ಒಂದು ಚಿತ್ರ ಮುಗಿಸಿ, ಇನ್ನೊಂದು ಚಿತ್ರ ಮುಗಿಸಿದ್ದು ಹೇಗೆ ಅಂದರೆ, ಅದಕ್ಕೆ ಕಾರಣ ಲಾಕ್‍ಡೌನ್ ಎಂಬ ಉತ್ತರ ಬರುತ್ತದೆ.
ಲಾಕ್‍ಡೌನ್‍ನ ಆರು ತಿಂಗಳ ಸಮಯವನ್ನು ಅದ್ಭುತವಾಗಿ ಬಳಸಿಕೊಂಡ ಪ್ರಶಾಂತ್ ನೀಲ್,`ಸಲಾರ್' ಚಿತ್ರದ ಕೆಲಸಗಳನ್ನು ಮುಗಿಸಿಕೊಂಡರಂತೆ. ಮೊದಲೇ ಎಲ್ಲವನ್ನೂ ಪಕ್ಕಾ ಪ್ಲಾನ್ ಮಾಡಿದ್ದರಿಂದಲೇ, `ಕೆಜಿಎಫ್ 2' ಚಿತ್ರದ ಚಿತ್ರೀಕರಣ ಮುಗಿಸುತ್ತಿದ್ದಂತೆಯೇ, ಈ ಚಿತ್ರವನ್ನು ಕೈಗೆತ್ತಿಕೊಳ್ಳುವುದಕ್ಕೆ ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ.
ಎಲ್ಲ ಅಂದುಕೊಂಡಂತಾದ್ರೆ,`ಕೆಜಿಎಫ್ 2' ಚಿತ್ರ ಬಿಡುಗಡೆಯಾಗುವ ಹೊತ್ತಿಗೆ,`ಸಲಾರ್' ಚಿತ್ರೀಕರಣ ಮುಗಿಯಲಿದೆ. ಈ ವರ್ಷವೇ ಆ ಚಿತ್ರವೂ ಸಹ ಬಿಡುಗಡೆಯಾದ್ರೆ ಆಶ್ಚರ್ಯವಿಲ್ಲ. ಅಲ್ಲಿಗೆ ಎರಡು, ನಾಲ್ಕು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದ ಪ್ರಶಾಂತ್ ನಿರ್ದೇಶನದ ಎರಡು ಚಿತ್ರಗಳು ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.