1996 ರಲ್ಲಿ ಬಿಡುಗಡೆಯಾದ 'ಇರುವರ್' ತಮಿಳು ಸಿನಿಮಾದಲ್ಲಿ ಪ್ರಕಾಶ್ ರಾಜ್ ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಎಂ. ಕರುಣಾನಿಧಿ ಪಾತ್ರ ಮಾಡಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರು. ಇದೀಗ ಅವರು ಮತ್ತೊಂದು ಸಿನಿಮಾದಲ್ಲಿ 2ನೇ ಬಾರಿಗೆ ಕರುಣಾನಿಧಿ ಪಾತ್ರ ನಿಭಾಯಿಸಿದ್ದಾರೆ.

ಕಂಗನಾ ರಣಾವತ್ ಜಯಲಲಿತಾ ಪಾತ್ರ ನಿರ್ವಹಿಸಿರುವ 'ತಲೈವಿ' ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತೆ ಕರುಣಾನಿಧಿ ಪಾತ್ರ ನಿರ್ವಹಿಸಿದ್ದಾರೆ. 'ಇರುವರ್' ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ್ದು ಆ ಚಿತ್ರದಲ್ಲಿ ಜಯಲಲಿತಾ ಪಾತ್ರವನ್ನು ಐಶ್ವರ್ಯ ರೈ, ಎಂಜಿಆರ್ ಪಾತ್ರವನ್ನು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಎಂ. ಕರುಣಾನಿಧಿ ಪಾತ್ರವನ್ನು ಪ್ರಕಾಶ್ ರಾಜ್ ನಿಭಾಯಿಸಿದ್ದರು. ಆದರೆ ಈಗ 'ತಲೈವಿ' ಸಿನಿಮಾದಲ್ಲಿ ಜಯಲಲಿತಾ ಅವರನ್ನು ಹೈಲೈಟ್ ಮಾಡಲಾಗಿದೆ. ಇದು ಜಯಲಲಿತಾ ಅವರ ಬಯೋಪಿಕ್ ಚಿತ್ರ.

ಈ ಚಿತ್ರದಲ್ಲಿ 'ರೋಜಾ' ಖ್ಯಾತಿಯ ಅರವಿಂದ್ ಸ್ವಾಮಿ ಎಂಜಿಆರ್ ಆಗಿ ನಟಿಸಿದ್ದಾರೆ. ಮಧು ಅವರು ಜಾನಕಿ ರಾಮಚಂದ್ರನ್ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ವಿಷ್ಣು ಇಂದೂರಿ ಹಾಗೂ ಶೈಲೇಶ್ ಸಿಂಗ್ ಬಂಡವಾಳ ಹೂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ನಟಿ ಜಯಲಲಿತಾ ಅವರ ಜೀವನದ ಸಾಹಸಗಾಥೆಯನ್ನು ಎ.ಎಲ್. ವಿಜಯ್ ಕೇಂದ್ರೀಕರಿಸಿ ಹಿಂದಿ ಹಾಗೂ ತಮಿಳಿನಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ. ಆದರೆ ಇತ್ತೀಚೆಗೆ ಚೆನ್ನೈ ಹೈಕೋರ್ಟ್ ನೀಡಿದ ಜಯಲಲಿತಾ ಆಸ್ತಿ ತೀರ್ಪು ವಿಚಾರವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಲಿಲ್ಲ.
ಒಟಿಟಿ ಪ್ಲಾಟ್ಫಾಮ್ ತಮಿಳು ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ದೊಡ್ಡ ಮೊತ್ತ ನೀಡಿ ಖರೀದಿಸಿದೆ ಎನ್ನಲಾಗಿದೆ. ತಮಿಳು ವರ್ಷನ್ ಅಮೆಜಾನ್ ಪ್ರೈಂ ಹಾಗೂ ಹಿಂದಿ ವರ್ಷನ್ ನೆಟ್ಫ್ಲಿಕ್ನಲ್ಲಿ ಪ್ರಸಾರವಾಗಲಿದ್ದು 55 ಕೋಟಿ ರೂಪಾಯಿ ಮೊತ್ತಕ್ಕೆ ಸಿನಿಮಾ ಮಾರಾಟವಾಗಿದೆ ಎಂದು ತಿಳಿದುಬಂದಿದೆ.