ಪ್ರಜ್ವಲ್ ಅಭಿನಯದ 'ಇನ್ಸ್ಪೆಕ್ಟರ್ ವಿಕ್ರಂ' ಮತ್ತು 'ಅರ್ಜುನ್ ಗೌಡ' ಚಿತ್ರಗಳು ಬಿಡುಗಡೆ ಆಗುವುದಕ್ಕೆ ಸಜ್ಜಾಗಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಎರಡೂ ಚಿತ್ರಗಳು ಬಿಡುಗಡೆ ಆಗಿರುತ್ತಿದ್ದವು. ಈ ನಡುವೆ 'ವೀರಂ' ಎಂಬ ಚಿತ್ರದಲ್ಲಿ ಪ್ರಜ್ವಲ್ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತು. ಚಿತ್ರದ ಫೋಟೋಶೂಟ್ ಸಹ ಆಗಿತ್ತು. ಈಗ ಆ ಚಿತ್ರದ ಮುಹೂರ್ತ ಗುರುವಾರ ವಿಜಯನಗರ ಶ್ರೀವೀರಾಂಜನೇಯ ದೇವಸ್ಥಾನದಲ್ಲಿ ನೆರವೇರಿದೆ.
ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪ್ರಜ್ವಲ್, ರಚಿತಾ ರಾಮ್, ಶ್ರೀನಗರ ಕಿಟ್ಟಿ, ಶ್ರುತಿ ಮುಂತಾದವರು ಭಾಗವಹಿಸಿದ್ದರು. ಹಿರಿಯ ನಟ ದೇವರಾಜ್ ಕುಟುಂಬ ಕೂಡಾ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಜನವರಿ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿ, ಮುಂದಿನ ವರ್ಷವೇ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. 'ವೀರಂ' ಚಿತ್ರದಲ್ಲಿ ಪ್ರಜ್ವಲ್‍ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದು, ಶಿಷ್ಯ ಖ್ಯಾತಿಯ ದೀಪಕ್ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ, ಶ್ರುತಿ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪೈಕಿ ಶ್ರೀನಗರ ಕಿಟ್ಟಿ ಅವರು ಪ್ರಜ್ವಲ್ ಅಣ್ಣನಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಈ ಪಾತ್ರದಲ್ಲಿ ಕಿಟ್ಟಿ ಮತ್ತು ಪ್ರಜ್ವಲ್ ಇಬ್ಬರೂ ರಗಡ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ನಿರ್ಮಿಸಿದ್ದ ಮತ್ತು ಇದೀಗ 'ಶುಗರ್ಲೆಸ್' ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುತ್ತಿರುವ ಕೆ.ಎಂ. ಶಶಿಧರ್, 'ವೀರಂ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಖದರ್' ಖ್ಯಾತಿಯ ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಛಾಯಾಗ್ರಹಣವಿದೆ.