ವಿಜಯ್ ಕಿರಗಂದೂರು ನಿರ್ಮಾಣದ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿರುವ ವಿಷಯ ಅದೆಷ್ಟು ಜನರ ಸಂತೋಷಕ್ಕೆ ಕಾರಣವಾಗಿದೆಯೋ, ಅದೇ ರೀತಿ ಹಲವು ಟೀಕೆಗಳು ಮತ್ತು ಗೊಂದಲಗಳಿಗೂ ಕಾರಣವಾಗಿದೆ.
ಪ್ರಭಾಸ್ ಅವರು ವಿಜಯ್ ಕಿರಂಗದೂರು ನಿರ್ಮಾಣದ ಚಿತ್ರದಲ್ಲೇನೋ ನಟಿಸುತ್ತಿದ್ದಾರೆ. ಆದರೆ, ಅದು ಕನ್ನಡ ಸಿನಿಮಾನಾ? ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರಕ್ಕೆ ಶ್ರಮಿಸುತ್ತಿರುವ ತಂತ್ರಜ್ಞರು ಕನ್ನಡದವರಾದರೂ ಇದೊಂದು ಕನ್ನಡ ಚಿತ್ರವೆಂದು ಎಲ್ಲೂ ಹೇಳಿಕೊಂಡಿಲ್ಲ. ಆರಂಭದಿಂದಲೂ ಸಲಾರ್ ಅನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದೇ ಕರೆಯಲಾಗುತ್ತಿದೆ. ಮೇಲಾಗಿ ಇದು ಕನ್ನಡದ 'ಉಗ್ರಂ'ನ ರಿಮೇಕ್ ಇರಬಹುದು ಎಂಬ ಸುದ್ದಿ ಇರುವುದರಿಂದ ಇದು ಕನ್ನಡ ಚಿತ್ರವಾಗಿರುವುದಕ್ಕೆ ಸಾಧ್ಯವಿಲ್ಲ.
ಓದಿ: 'ಸಲಾರ್' ಸಿನಿಮಾಕ್ಕೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಇನ್ನು, 'ಸಲಾರ್' ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವುದರಿಂದ ಮೊದಲಿಗೆ ತೆಲುಗಿನಲ್ಲಿ ನಿರ್ಮಾಣವಾಗಿ ನಂತರ ಕನ್ನಡ ಸೇರಿದಂತೆ ಬೇರೆ ಭಾಷೆಗಳಿಗೆ ಡಬ್ ಆಗಲಿದೆ. ಹಾಗಾಗಿ ಇದು ಕನ್ನಡಿಗರು ಮಾಡುತ್ತಿರುವ ಚಿತ್ರವೇ ಹೊರತು ಒರಿಜಿನಲ್ ಕನ್ನಡ ಚಿತ್ರವಲ್ಲ ಎಂಬುದು ಗಾಂಧಿನಗರದವರ ಅಭಿಪ್ರಾಯ. ಹಾಗೆಯೇ, ಈ ಚಿತ್ರದ ಮೂಲಕ ಪ್ರಭಾಸ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿಲ್ಲ. ಅದರ ಬದಲು ಕನ್ನಡದವರು ಈ ಚಿತ್ರದ ಮೂಲಕ ಬೇರೆ ಭಾಷೆಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾವಾಗ 'ಸಲಾರ್' ಚಿತ್ರದ ಘೋಷಣೆಯಾಯಿತೋ ಆಗಿನಿಂದಲೇ ಇಂಥದ್ದೊಂದು ಚಿತ್ರ ಮಾಡುವ ಅವಶ್ಯಕತೆ ಇತ್ತಾ?, ಬೇರೆ ಭಾಷೆಯ ಚಿತ್ರ ಮಾಡುವ ಬದಲು ಕನ್ನಡದಲ್ಲೇ ಇನ್ನೊಂದಿಷ್ಟು ಚಿತ್ರಗಳನ್ನು ಮಾಡಬಹುದಿತ್ತಲ್ಲಾ? ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿವೆ. ಆದರೆ, ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ.
ಏಕೆಂದರೆ, ಈ ಹಿಂದೆ ಕನ್ನಡದ ಹಲವು ನಿರ್ಮಾಪಕರು ಮತ್ತು ನಿರ್ದೇಶಕರು ಬೇರೆ ಭಾಷೆಗಳಿಗೆ ಹೋಗಿ ಚಿತ್ರ ಮಾಡಿ ಬಂದಿದ್ದಾರೆ. ಆಗ ಈ ಬೆಳವಣಿಗೆ ಸಹಜ ಮತ್ತು ಕನ್ನಡಿಗರೊಬ್ಬರು ಇಂಥದ್ದೊಂದು ದೊಡ್ಡ ರಿಸ್ಕ್ ತೆಗೆದುಕೊಂಡು ಪ್ಯಾನ್ ಇಂಡಿಯಾ ಚಿತ್ರ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.