ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಕಾಂಬಿನೇಶನ್‌ನಲ್ಲಿ ಇತ್ತೀಚೆಗೆ ತೆರೆ ಕಂಡ ನಟಸಾರ್ವಭೌಮ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ವಿಜಯಯಾತ್ರೆ ಕೈಗೊಂಡಿದ್ದು, ಚಿತ್ರಮಂದಿರಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ನಟಸಾರ್ವಭೌಮ ಚಿತ್ರತಂಡ ಭೇಟಿ ನೀಡಲಿದ್ದಾರೆ.
ಇದೇ ಮಾರ್ಚ್ 3ರ ಭಾನುವಾರ ಬೆಳಗ್ಗೆ 10 ಗಂಟೆಗೆ ಹಾವೇರಿ ,11:30ಕ್ಕೆ ರಾಣೆಬೆನ್ನೂರು, ಮಧ್ಯಾಹ್ನ 1 ಗಂಟೆಗೆ ದಾವಣಗೆರೆ, 2:30 ಕ್ಕೆ ಚಿತ್ರದುರ್ಗ, 3:30 ಹಿರಿಯೂರು, ಸಂಜೆ 4:30 ಕ್ಕೆ ಶಿರಾ, 5:30ಕ್ಕೆ ತುಮಕೂರು ಸೇರಿ ಈ ಎಲ್ಲಾ ಜಿಲ್ಲೆಗಳ ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ. ಅಪ್ಪುವನ್ನು ಒಂದ್ಸಾರಿ ಕಣ್ಣಾರೆ ನೋಡಬೇಕು ಎಂದು ಬೆಂಗಳೂರಿನವರೆಗೂ ಬರುವ ಈ ಎಲ್ಲಾ ಜಿಲ್ಲೆಯ ಅಪ್ಪು ಅಭಿಮಾನಿಗಳು ತಮ್ಮ ಊರಲ್ಲೇ ಅಪ್ಪುವನ್ನು ಕಣ್ತುಂಬಿಕೊಳ್ಳಬಹುದು. ಅಪ್ಪು ತಮ್ಮ ಊರಿಗೆ ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ಅಪ್ಪುವನ್ನು ಭರ್ಜರಿಯಾಗಿ ಸ್ವಾಗತಿಸಲು ತಯಾರಾಗಿದ್ದಾರೆ.
ಇದರೊಂದಿಗೆ ಚಿತ್ರತಂಡ ವಿಶೇಷ ಸೂಚನೆಯೊಂದನ್ನೂ ನೀಡಿದೆ. ಇನ್ನುಳಿದ ಜಿಲ್ಲೆಗಳಿಗೂ ಚಿತ್ರತಂಡ ಭೇಟಿ ನೀಡಲು ಪ್ಲಾನ್ ಮಾಡಿದ್ದು, ಆ ದಿನಾಂಕವನ್ನೂ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದೆ. ಚಿತ್ರದ ಸಕ್ಸಸ್‌ನಿಂದ ಖುಷಿಯಾಗಿರುವ ಚಿತ್ರತಂಡ ರಾಜ್ಯದ ನಾನಾ ಭಾಗಗಳಿಗೆ ಭೇಟಿ ನೀಡುವುದಾಗಿ ಹೇಳಿತ್ತು. ಅದರಂತೆ ಈಗಾಗಲೇ ಅಪ್ಪು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು, ಮಂಗಳೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.
ಸಾವಿರಾರು ಅಭಿಮಾನಿಗಳು ಅಪ್ಪುವನ್ನು ನೋಡಿ ಅವರನ್ನು ಮಾತನಾಡಿಸಿ, ಶೇಕ್ ಹ್ಯಾಂಡ್ ನೀಡಿ ಫೋಟೋ ತೆಗೆಸಿಕೊಂಡು ಸಂತೋಷಪಟ್ಟರು. ಇದೀಗ ರಾಜ್ಯಾದ್ಯಂತ ವಿಜಯಯಾತ್ರೆ ಮುಂದುವರೆದಿದೆ. ಈ ವಿಚಾರವನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದ ನಟಸಾರ್ವಭೌಮ ಇದೇ ತಿಂಗಳ 7 ರಂದು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದಿತ್ತು. ಬಹುದಿನಗಳ ನಂತರ ಅಪ್ಪುವನ್ನು ಹೊಸ ಅವತಾರದಲ್ಲಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.