ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಸಿಂಗ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಜನರ ಮೆಚ್ಚುಗೆ ಗಳಿಸಿದೆ. ರಿಲೀಸ್ ಆದ ದಿನದಿಂದ ಇದುವರೆಗೂ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಚಿತ್ರತಂಡಕ್ಕೆ ಪೈರಸಿ ಶಾಕ್ ನೀಡಿದೆ. ಇದರಿಂದ ಚಿತ್ರತಂಡ ನಷ್ಟ ಅನುಭವಿಸಿದೆ ಎಂದು ಇಂದು ಚಿತ್ರದ ಸಕ್ಸಸ್ ಪ್ರೆಸ್ಮೀಟ್ನಲ್ಲಿ ಹೇಳಿದೆ. ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ತಾರಾ ಅನುರಾಧ, ನಟ ಶಿವರಾಜ್ ಕೆ.ಆರ್. ಪೇಟೆ ಹಾಗೂ ಇನ್ನಿತರರು ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದರು. ನಿರ್ಮಾಪಕ ಉದಯ್ ಕೆ. ಮೆಹ್ತಾ ಕೂಡಾ ಮಾತನಾಡಿ, 'ಸಿಂಗ' ಸಿನಿಮಾ ಚಿರಂಜೀವಿ ಸರ್ಜಾ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ ಎಷ್ಟು ಹಣ ಬಂದಿದೆ ಅನ್ನೋದನ್ನ ಹೇಳಲ್ಲ ಎಂದರು.
ಇನ್ನು ಚಿತ್ರದ ಪೈರಸಿ ಬಗ್ಗೆ ಮಾತನಾಡಿದ ನಿರ್ಮಾಪಕ ಉದಯ್ ಮೆಹ್ತಾ, ಪೈರಸಿ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೈರಸಿ ತಡೆಯುವ ಸಂಸ್ಥೆಯ ಗಿರೀಶ್ ಎಂಬುವರ ಸಹಾಯದಿಂದ ಫೇಸ್ಬುಕ್ ಹಾಗೂ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದ ಸಿನಿಮಾವನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಪೈರಸಿ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಬಗ್ಗೆ ಪ್ರೆಸ್ಮೀಟ್ನಲ್ಲಿ ಗಿರೀಶ್ ತಿಳಿಸಿದರು.