ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಹೈದರಾಬಾದ್ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಭರದಿಂದ ಸಾಗಿದೆ. ಮೊನ್ನೆಯಷ್ಟೇ ಚಿತ್ರತಂಡ ಚಿತ್ರದಲ್ಲಿ ಸುದೀಪ್ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡಿತ್ತು. ಇಂದು ಚಿತ್ರತಂಡ ನಿರೂಪ್ ಭಂಡಾರಿ ಕ್ಯಾರೆಕ್ಟರ್ ರಿವೀಲ್ ಮಾಡಿದೆ.
ಇಂದು ನಿರೂಪ್ ಭಂಡಾರಿ ಹುಟ್ಟುಹಬ್ಬವಾಗಿದ್ದು ಅಭಿಮಾನಿಗಳಿಗೆ ಹಾಗೂ ನಿರೂಪ್ ಅವರಿಗೆ ಚಿತ್ರತಂಡ ಈ ಸರ್ಪ್ರೈಸ್ ನೀಡಿದೆ. ಚಿತ್ರದಲ್ಲಿ ನಿರೂಪ್, ಸಂಜೀವ್ ಗಾಂಭೀರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈ ವಿಚಾರವನ್ನು ನಿರ್ದೇಶಕ ಅನೂಪ್ ಭಂಡಾರಿ ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ, 'ಫ್ಯಾಂಟಮ್ ಚಿತ್ರದ ಇನ್ನೊಂದು ಮುಖ್ಯವಾದ ಪಾತ್ರ ಸಂಜೀವ್ ಗಾಂಭೀರ ಅಲಿಯಾಸ್ ಸಂಜು. ಸಂಜು ಲಂಡನ್ನಲ್ಲಿ ಬೆಳೆದು ಹುಟ್ಟಿದೂರಿಗೆ ವಾಪಸ್ ಬರ್ತಾನೆ. ಅವನು ನಗ್ತಾನೆ, ನಗಿಸ್ತಾನೆ, ತರ್ಲೆ ಮಾಡ್ತಾನೆ, ಎಲ್ಲರ ಮನಸ್ಸಿಗೂ ಹತ್ತಿರವಾಗ್ತಾನೆ. ಸಂಜು ಪಾತ್ರವನ್ನು ನಿರೂಪ್ ಭಂಡಾರಿ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ನಿರೂಪ್. 'ಫ್ಯಾಂಟಮ್' ಪ್ರಪಂಚಕ್ಕೆ ನಿನಗೆ ಸ್ವಾಗತ ಎಂದು ಸಹೋದರ ನಿರೂಪ್ಗೆ ಅಣ್ಣ ಅನೂಪ್ ಭಂಡಾರಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಕಿಚ್ಚ ಸುದೀಪ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.