ಕಿರುತೆರೆಯ ಹಲವು ಕಲಾವಿದರು ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ! ಆದರೆ ಈ ನಟಿ ಅದಕ್ಕೆ ತದ್ವಿರುದ್ಧ! ಅಂದರೆ ಆಕೆ ಮೊದಲು ಕಾಣಿಸಿಕೊಂಡಿದ್ದು ಬೆಳ್ಳಿತೆರೆಯಲ್ಲಿ! ನಂತರ ಕಿರುತೆರೆಗೆ ಪರಿಚಿತವಾದ ಆ ನಟಿಯ ಹೆಸರು ಪವಿತ್ರಾ ನಾಯ್ಕ್.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಬಾಂಧವ್ಯದ ಕಥೆಯನ್ನೊಳಗೊಂಡ 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ನಾಯಕಿ ನಂದಿನಿ ಆಗಿ ಮನ ಸೆಳೆಯುತ್ತಿರುವ ಪವಿತ್ರಾ ನಾಯ್ಕ್ ಅಭಿನಯಕ್ಕೆ ಮನ ಸೋಲದವರಿಲ್ಲ. ಬಯಸದೇ ಬಂದ ಅವಕಾಶವನ್ನು ಇಲ್ಲ ಎಂದು ದೂರ ಮಾಡದೇ ಒಪ್ಪಿಕೊಂಡಿರುವ ಪವಿತ್ರಾ ಅವರನ್ನು ಜನ ಸ್ವೀಕರಿಸಿದ್ದಾಗಿದೆ.
ಈಗಾಗಲೇ ಬೆಳ್ಳಿತೆರೆಯಲ್ಲಿ ನಟಿಸಿ ಅನುಭವವಿದ್ದರೂ ಕಿರುತೆರೆ ಅವರಿಗೆ ಹೊಸದು. "ಕಿರುತೆರೆಯಲ್ಲಿ ನಟಿಸುವ ಅವಕಾಶ ಬಂದಾಗ ಮೊದಲಿಗೆ ಭಯವಾಗಿತ್ತು. ಯಾಕೆಂದರೆ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಾನು ನಟಿಸಬೇಕಿತ್ತು. ಎಲ್ಲದಕ್ಕಿಂತಲೂ ಕಿರುತೆರೆಗೆ ನಾನು ಹೊಸಬಳು. ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವೂ ಕೂಡಾ ನನ್ನಲ್ಲಿತ್ತು. ಇದೀಗ ನನ್ನ ಭಯ ದೂರವಾಗಿದೆ. ಇಂದು ನಾನು ಅದೆಲ್ಲಿ ಹೋದರೂ ಜನ ನೀವು ರಕ್ಷಾಬಂಧನದ ನಂದಿನಿ ಅಲ್ವಾ ಎಂದು ಗುರುತಿಸುವಾಗ ಸಾರ್ಥಕ ಎಂದೆನಿಸುತ್ತದೆ" ಎಂದು ಕಿರುತೆರೆ ಪಯಣವನ್ನು ವಿವರಿಸುತ್ತಾರೆ ಪವಿತ್ರಾ.
ಎಲ್ಲಿ ನನ್ನ ವಿಳಾಸ, ಲಡ್ಡು, ಸ್ವೇಚ್ಛ ಸಿನಿಮಾಗಳಲ್ಲಿ ಪವಿತ್ರಾ ಅವರು ಬಣ್ಣ ಹಚ್ಚಿದ್ದು ಈ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ರಕ್ಷಾಬಂಧನ ಧಾರಾವಾಹಿಯ ನಂದಿನಿ ಪಾತ್ರಕ್ಕೆ ಜೀವ ತುಂಬುತ್ತಿರುವ ಪವಿತ್ರಾ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.