ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಖಳನಾಯಕಿ ಅನುಷ್ಕಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಮಾನ್ಸಿ ಜೋಶಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
ಎರಡು ವರ್ಷಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಅನುಷ್ಕಾ ಪಾತ್ರ ಇದೀಗ ಮುಕ್ತಾಯವಾಗುತ್ತಿದೆ. ಈ ವಿಚಾರವನ್ನು ಸ್ವತಃ ಮಾನ್ಸಿ ಜೋಶಿ ಅವರೇ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ನಟಿ, "ನನ್ನ ಎಲ್ಲಾ ಅಭಿಮಾನಿಗಳು ಮತ್ತು ಸ್ನೇಹಿತರಿಗೆ, 'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರದಲ್ಲಿ ನನ್ನ ಪಾತ್ರ ಕೊನೆಗೊಂಡಿದೆ ಎಂದು ತಿಳಿಸಲು ಬಯಸುತ್ತೇನೆ.
ನನಗೆ ಈ ಪಾತ್ರವನ್ನು ನೀಡಿ ಮತ್ತು ನನ್ನನ್ನು ಎಲ್ಲ ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕಾಗಿ ಇಡೀ ಪಾರು ತಂಡ ಮತ್ತು ವಾಹಿನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಶೀಘ್ರದಲ್ಲೇ ಕನ್ನಡ ಉದ್ಯಮದಲ್ಲಿ ಹೊಸ ಯೋಜನೆಯೊಂದಿಗೆ ಬರುತ್ತೇನೆ ಮತ್ತು ನನ್ನ ನಟನೆಯೊಂದಿಗೆ ನಿಮ್ಮೆಲ್ಲರನ್ನು ಯಾವಾಗಲೂ ರಂಜಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಬಿಳಿ ಹೆಂಡ್ತಿ ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ ಮಾನ್ಸಿ ಜೋಶಿ ಮುಂದೆ ರಾಧಾ ರಮಣ, ನಾಯಕಿ ಹಾಗೂ ಪಾರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ತಮಿಳಿನ ಅನುಬುಡನ್ ಖುಷಿ ಧಾರಾವಾಹಿಯಲ್ಲಿ ಖುಷಿಯಾಗಿ ಮೋಡಿ ಮಾಡುವ ಮೂಲಕ ಪರಭಾಷೆಯಲ್ಲೂ ಕಮಾಲ್ ಮಾಡಿದ ಮಾನ್ಸಿ, ಪ್ರಸ್ತುತ ತೆಲುಗಿನ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಓದಿ: ಹೊಸ ಪ್ರತಿಭೆಗಳೊಂದಿಗೆ ಚಿತ್ರ ನಿರ್ದೇಶಿಸಲು ಸಜ್ಜಾದ ನಿರ್ದೇಶಕ ಶಶಾಂಕ್