ಕನ್ನಡ ಚಿತ್ರರಂಗದಲ್ಲಿ ನಮ್ಮ ಕನ್ನಡ ನಟಿಯರಿಗಿಂತ ಪರಭಾಷೆ ಚೆಲುವೆಯರಿಗೆ, ಡಿಮ್ಯಾಂಡ್ ಹೆಚ್ಚಾಗುತ್ತಿದೆ. ದೊಡ್ಡ ಸ್ಟಾರ್ಗಳ ಸಿನಿಮಾದಲ್ಲಿ ಹೊರಗಿನ ನಟಿಮಣಿಯರಿಗೆ ಮಣೆ ಹಾಕುವುದು ಇತ್ತಿಚೆಗೆ ಸಾಮಾನ್ಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಬಹಳ ಹಿಂದಿನಿಂದಲೂ ಸ್ಯಾಂಡಲ್ವುಡ್ನಲ್ಲಿ ಪರಭಾಷೆ ನಟಿಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬರಲಾಗಿದೆ. ಹಾಗೆ ನೋಡಿದರೆ, ಬೇರೆ ಭಾಷೆಯ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ವಿ. ರವಿಚಂದ್ರನ್ ಅವರಿಗೆ ಸಲ್ಲುತ್ತದೆ. 33 ವರ್ಷಗಳ ಹಿಂದೆ ರವಿಚಂದ್ರನ್ ತಮ್ಮ 'ಪ್ರೇಮಲೋಕ' ಚಿತ್ರಕ್ಕೆ ಬಾಲಿವುಡ್ನಿಂದ ಜೂಹಿಚಾವ್ಲಾ ಅವರನ್ನು ಕರೆ ತಂದರು. ಜೂಹಿ ಮಾತ್ರವಲ್ಲ ತಮಿಳಿನ ಖುಷ್ಬೂ ಹಾಗೂ ಬಾಲಿವುಡ್ನ ಶಿಲ್ಪಾ ಶೆಟ್ಟಿ ಅವರನ್ನೂ ಕನ್ನಡಕ್ಕೆ ಕರೆತಂದರು ರವಿಚಂದ್ರನ್. ಬಹಳ ಕಾಲದಿಂದಲೂ ಈ ಟ್ರೆಂಡ್ ನಡೆದುಬಂದಿದೆ. ಹೀಗಾಗಿ ಇಂದು ದೊಡ್ಡ ನಟರ ಸಿನಿಮಾಗಳಿಗೆ ಪರಭಾಷೆ ನಟಿಯರನ್ನು ಕರೆತರುವ ಸಂಸ್ಕೃತಿ ಇದೆ. ಶಿವರಾಜ್ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್‍ಕುಮಾರ್, ಯಶ್, ಉಪೇಂದ್ರ ಸಿನಿಮಾಗಳಲ್ಲಿ ಹೆಚ್ಚಾಗಿ ಪರಭಾಷಾ ನಟಿಯರನ್ನು ಕರೆತರಲಾಗುತ್ತಿದೆ.
ಪುನೀತ್ ರಾಜ್‍ಕುಮಾರ್ ಕನ್ನಡದ ನಟಿಯರಿಗಿಂತ ಹೆಚ್ಚಾಗಿ ಬೇರೆ ಭಾಷೆಯ ಚೆಲುವೆಯರೊಂದಿಗೆ ಹೆಚ್ಚು ರೊಮ್ಯಾನ್ಸ್ ಮಾಡಿರುವುದುಂಟು. ಸದ್ಯಕ್ಕೆ ಬಿಡುಗಡೆಗೆ ರೆಡಿಯಾಗಿರುವ 'ಯುವರತ್ನ' ಚಿತ್ರದಲ್ಲಿ ದಕ್ಷಿಣ ಭಾರತದ ನಟಿ ಸಯೇಶಾ ಸೈಗಲ್ ಪುನೀತ್ ಜೊತೆ ಡ್ಯೂಯೆಟ್ ಹಾಡಿದ್ದಾರೆ. ಇನ್ನು ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3 ' ಚಿತ್ರದಲ್ಲಿ ಕೇರಳ ಕುಟ್ಟಿ ಮಡೋನಾ ಸೆಬಾಸ್ಟಿನ್ ಕಿಚ್ಚನಿಗೆ ಜೊತೆಯಾಗಿದ್ದಾರೆ. 'ಕೋಟಿಗೊಬ್ಬ 2 ' ಚಿತ್ರದಲ್ಲಿ ಕೂಡಾ ಸುದೀಪ್ ನಿತ್ಯಾ ಮೆನನ್ ಜೊತೆ ರೊಮ್ಯಾನ್ಸ್ ಮಾಡಿದ್ದರು. ಇದರೊಂದಿಗೆ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿದ್ದಾರೆ. ಆಶಾ ಭಟ್ ಕನ್ನಡತಿಯಾಗಿದ್ದರೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಅವರನ್ನು ಪರಭಾಷಾ ನಟಿ ಎಂದೇ ಗುರುತಿಸಲಾಗಿದೆ.
ಇನ್ನು ಈಗಾಗಲೇ ಸ್ಟಾರ್ ನಟರೊಂದಿಗೆ ನಟಿಸಿರುವ ಪರಭಾಷಾ ನಟಿಯರ ಬಗ್ಗೆ ಹೇಳುವುದಾದರೆ ಪುನೀತ್ ರಾಜ್‍ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದಲ್ಲಿ ಮಾಲಿವುಡ್‌ನ ಅನುಪಮಾ ಪರಮೇಶ್ವರನ್ ಮಿಂಚಿದ್ದರು. 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಜೊತೆ ಆಕಾಂಕ್ಷಾ ಸಿಂಗ್ ರೊಮ್ಯಾನ್ಸ್ ಮಾಡಿದ್ದರು. ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಟ್ಟಿಗೆ ನಟಿಸಿದ್ದ 'ದಿ ವಿಲನ್' ಚಿತ್ರದಲ್ಲಿ ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ದರ್ಬಾರ್ ಜೋರಾಗಿತ್ತು. ಶಿವಣ್ಣ ಅಭಿನಯದ 'ದ್ರೋಣ' ದಲ್ಲಿ ಮಾಲಿವುಡ್‌ನ ಇನಿಯಾ ನಟಿಸಿದ್ದರು. ಗಣೇಶ್ ಅಭಿನಯದ 'ಗಿಮಿಕ್' ಚಿತ್ರದಲ್ಲಿ ಪಂಜಾಬ್ ನಟಿ ರೋನಿಕಾ ಬಂದು ಹೋಗಿದ್ದರು.
ಹೀಗೆ ಕನ್ನಡ ಚಿತ್ರರಂಗದಲ್ಲಿ ಪರಭಾಷೆ ನಟಿಯರ ದರ್ಬಾರ್ ಜೋರಾಗಿದೆ. ಒಬ್ಬ ಸ್ಟಾರ್ ನಟನ ಜೊತೆ ಅಭಿನಯಿಸಲು ಬೇರೆ ಭಾಷೆಯ ನಟಿಯನ್ನು ಕರೆತಂದರೆ ಅಭಿಮಾನಿಗಳನ್ನು ಸುಲಭವಾಗಿ ಥಿಯೇಟರ್ಗೆ ಸೆಳೆಯಬಹುದು ಎಂದು ವ್ಯಾಪಾರದ ದೃಷ್ಟಿಯಿಂದ ನಿರ್ಮಾಪಕರು ಪರಭಾಷೆ ನಟಿಯರನ್ನು ಹೆಚ್ಚಿಗೆ ಕರೆತರುತ್ತಿದ್ದಾರೆ. ಕನ್ನಡ ನಟಿಯರಾದ ರಚಿತಾ ರಾಮ್, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ಈ ನಟರ ಜೊತೆ ನಟಿಸಲು ಹೊಂದುವುದಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ನಿರ್ಮಾಪಕ, ನಿರ್ದೇಶಕರೇ ಉತ್ತರಿಸಬೇಕು.