ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಜೂನ್ 29 ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಪ್ರದರ್ಶಕರ ವಲಯದಿಂದ ರಾಕ್ಲೈನ್ ವೆಂಕಟೇಶ್ ಹಾಗೂ ತುಮಕೂರು ಜೈರಾಜ್ ಸ್ಫರ್ಧಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ಬಣಕಾರ್, ಪ್ರಮಿಳಾ ಜೋಷಾಯ್, ದಿನೇಶ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗಿದೆ. ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ ಸ್ಪರ್ಧಿಸುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದ ‘ತಾಯಿ‘ ಸಿನಿಮಾವನ್ನು ಪ್ರಮಿಳಾ ಜೋಷಾಯ್ ನಿರ್ಮಿಸಿದ್ದರು. ಈ ಸಿನಿಮಾ ಅನೇಕ ಪ್ರಶಸ್ತಿಗಳನ್ನೂ ಪಡೆದಿತ್ತು. ಆದರೆ, ಕೇವಲ ಒಂದೇ ಒಂದು ಸಿನಿಮಾ ಮಾಡಿ ಚುನಾವಣೆಗೆ ಮಾತ್ರ ನಿರ್ಮಾಪಕರ ವಲಯದಿಂದ ಸ್ಪರ್ಧಿಸಲು ಹೇಗೆ ಸಾಧ್ಯ ಎಂದು ಸ್ಯಾಂಡಲ್ವುಡ್ನ ಬಹಳಷ್ಟು ಮಂದಿ ಪ್ರಶ್ನಿಸಿದ್ದಾರೆ. ಈ ಮಾತು ಪ್ರಮಿಳಾ ಅವರಲ್ಲಿ ಬೇಸರ ಮೂಡಿಸಿದೆ.
ಪ್ರಮಿಳಾ ಜೋಷಾಯ್ ಬೇಸರಗೊಳ್ಳಲು ಮತ್ತೊಂದು ಕಾರಣ ಇದೆ. ಅವರಿಗಿಂತ ವಯಸ್ಸಿನಲ್ಲಿ ಕಿರಿಯರಾದ ಅವರ ಸಹನಟಿಯರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಡಾ.ಜಯಮಾಲ , ಉಮಾಶ್ರೀ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ತಾರಾ ಬಿಜೆಪಿಯಿಂದ ಎಂಎಲ್ಸಿ ಆಗಿದ್ದಾರೆ. ಶ್ರುತಿ ಈ ಹಿಂದೆ ಮಹಿಳಾ ಕಲ್ಯಾಣ ಆಯೋಗದ ಮುಖ್ಯಸ್ಥೆ ಆಗಿದ್ದರು. ಆದರೆ, ನಾನು ಯಾವಾಗ ಅಂತಹ ಸ್ಥಾನಕ್ಕೇರುವುದು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಪ್ರಮಿಳಾ ಮನಸ್ಸಿನಲ್ಲಿ ಎದ್ದಿದೆ. ಅಲ್ಲದೆ, ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ಬಣಕಾರ್ ಹಾಗೂ ದಿನೇಶ್ ಗಾಂಧಿ ಕೂಡಾ ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಉಮೇಶ್ ಬಣಕಾರ್ ಪರವಾಗಿ ಸಾಕಷ್ಟು ಕಲಾವಿದರು ಇರುವುದು ಕೂಡಾ ಪ್ರಮಿಳಾ ಜೋಷಾಯ್ ಬೇಸರಕ್ಕೆ ಕಾರಣವಾಗಿದೆ.