ಹಿರಿಯ ನಟ ಮಿಮಿಕ್ರಿ ರಾಜಗೋಪಾಲ್ ಕನ್ನಡ ಚಿತ್ರರಂಗದಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ನೂರಾರು ಚಿತ್ರಗಳಿಗೆ ಹಾಸ್ಯ ಕಲಾವಿದನಾಗಿ ಬಣ್ಣ ಹಚ್ಚಿದವರು. ಆದರೆ, ಈಗ ಬೆರಳೆಣಿಕೆಯಷ್ಟು ಸಿನಿಮಾಗಳಿಗೆ ಆಹ್ವಾನ ಬರುತ್ತಿರುವುದರಿಂದ ರಾಜಗೋಪಾಲ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.
ಒಂದು ಸ್ಟೇಜ್ ಶೋನಲ್ಲಿ 15 ನಿಮಿಷ ರಂಜಿಸಿದ ರಾಜಗೋಪಾಲ್ ಅಂತವರಿಗೆ 5000 ರೂ. ಬದಲು 500 ಕೊಟ್ಟರೆ ಏನಾಗಬೇಡ. ಇಂತಹುದೇ ಒಂದು ಸಂದರ್ಭ ಅವರನ್ನು ಬೇಗುದಿಗೆ ತಳ್ಳಿದೆ. ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ರಾಜಗೋಪಾಲ್ ಅವರಿಗೆ ಹಾಸ್ಯ ಜೊತೆಗೆ ಮಿನುಗು ತಾರೆ ಕಲ್ಪನಾ ಕಂಠದಲ್ಲಿ ಮಾತನಾಡಿ, ರಂಜಿಸುವ ಆಹ್ವಾನ ಬಂದಿತ್ತು. ಅಲ್ಲಿ ಎಲ್ಲರನ್ನೂ ನಕ್ಕು ನಗಿಸಿದ ಹಿರಿಯ ಹಾಸ್ಯ ನಟನ ಕೈಗೆ 500 ರೂಪಾಯಿ ಸಂಭಾವನೆ ಕೊಟ್ಟು, ಒಂದು ಶಾಲು ಹೊದಿಸಿ ಹೋಗಿ ಬನ್ನಿ ಅಂದರೆ ಇವರಿಗೆ ಹೇಗಾಗಿರಬೇಕು?
ಅದೇ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿ ಸೋಮಶೇಖರ್ , ರಾಜಗೋಪಾಲ್ ಅವರ ಕಾರ್ಯಕ್ರಮ ನೋಡಿ ಇವರ ಜೇಬಿಗೆ 2000 ರೂಪಾಯಿ ನೀಡಿದ್ರು. ಇಲ್ಲಿ ಬಿಟ್ಟರೆ ರಾಜಗೋಪಾಲ್ ಅವರಿಗೆ ಸಿಕ್ಕ ಸಂಭಾವನೆ ಕೇವಲ 500. ಇಷ್ಟು ಸಂಭಾವನೆ ನೋಡಿ ಇವರಷ್ಟೇ ಅಲ್ಲ ಮನೆಯಲ್ಲಿ ಅವರ ಮಡದಿ ಸಹ ದಂಗಾದರಂತೆ.
ಈ ರಾಜಗೋಪಾಲ್ ಜೀವನದಲ್ಲಿ ಲುಕ್ಕಲ್ಲ, ಲಕ್ಕು ಬೇಕು ಎಂದೇ ನಂಬಿದವರು. ಮತ್ತೊಂದು ಕಣ್ಣೀರಿನ ಕಥೆ ಹೇಳುವುದಕ್ಕೂ ಮುಂಚೆ ಅವರ ಕಣ್ಣಲ್ಲಿ ಹನಿಗಳು ಜಿನುಗುತ್ತಿತ್ತು. ಹೇಳದೇ ಸುಮ್ಮನಾದರು. ಹೊಸಬರಿಗೆ ಹಳಬರು ಬೇಕಿಲ್ಲ. ಅದಕ್ಕೆ ಸ್ಟೇಜ್ ಶೋ, ನಾಟಕಗಳನ್ನು ಅಭಿನಯಿಸುತ್ತಾ ಬರಬೇಕಾಗಿದೆ. ನಾನು ಹೆಸರಿಗೆ ರಾಜ ಆದ್ರೆ ಜೀವನ ಕಷ್ಟ ಕಷ್ಟ ಎನ್ನುತ್ತಾರೆ.
ಮಿಮಿಕ್ರಿ ರಾಜಗೋಪಾಲ್ 1982 ರಿಂದ ಸಾವಿರಾರು ಸ್ಟೇಜ್ ಶೋ ನೀಡುತ್ತಾ ಬಂದಿದ್ದಾರೆ. ಪತ್ನಿ ರೇಣುಕಾ ಜೊತೆ ಕೆಂಗೇರಿಯಲ್ಲಿ ಮನೆ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಮದುವೆ ಮಾಡಿದ್ದೇ ನನ್ನ ಗಳಿಕೆ ಎನ್ನುತ್ತಾರೆ. ಒಂದು ಕಾಲದಲ್ಲಿ ಎನ್.ಎಸ್.ರಾವ್ (ಓಂ ಪ್ರಕಾಶ್ ರಾವ್ ತಂದೆ) ಹಿರಿಯ ಕಲಾವಿದರು 12 ಸಿನಿಮಾಗಳಲ್ಲಿ ಅಭಿನಯಿಸಿ ಡಬ್ಬಿಂಗ್ ಮಾಡದೇ ಕಾಲವಾಗಿದ್ದರು. ಆಗ ಅವರ ಧ್ವನಿಯಲ್ಲಿ ಇದೆ ರಾಜಗೋಪಾಲ್ 12 ಸಿನಿಮಾಗಳಿಗೆ ಮಿಮಿಕ್ರಿ ಮಾಡಿದವರು. ಮೇರು ನಟಿ ಕಲ್ಪನಾ ಧ್ವನಿಯಲ್ಲಿ ಇವರು ಮಾತನಾಡಿದರೆ ಪ್ರೇಕ್ಷಕರು ನಿಶ್ಯಬ್ದವಾಗಿ ಕೇಳುತ್ತಾರೆ. ಆದರೆ, ಈ ಪ್ರತಿಭೆಗೆ ಮಾತ್ರ ಜೀವನ ನಡೆಸುವಷ್ಟು ಕಾಸು ತಂದು ಕೊಡುತ್ತಿಲ್ಲ ಎನ್ನುವುದೇ ದುರ್ದೈವದ ಸಂಗತಿ