ಹೆಣ್ಮಕ್ಕಳೇ ಸ್ಟ್ರಾಂಗು ಗುರು..... ಎಂದು ಯೋಗರಾಜ ಭಟ್ಟರು ಹಾಡು ಬರೆದದ್ದು ಆಗೊಮ್ಮೆ ಈಗೊಮ್ಮೆ ನಿಜವಾಗುತ್ತಿದೆ. ಕನ್ನಡದಲ್ಲಿ ಪ್ರೇಮ ಕಾರಂತ್ರ ನಂತರ ಬೆರಳೆಣಿಕೆಯಷ್ಟೇ ನಿರ್ದೇಶಕಿಯರು ಇರುವುದು. ಇವರ ಸಾಲಿಗೆ ಈಗ ಮತ್ತೊಬ್ಬ ಮಹಿಳಾ ನಿರ್ದೇಶಕಿ ರೂಪಾ ರಾವ್ ಆಗಮಿಸಿದ್ದಾರೆ.
‘ಗಂಟುಮೂಟೆ’ ಚಿತ್ರದ ಮೂಲಕ ನಿರ್ದೇಶನ ಹಾಗೂ ನಿರ್ಮಾಣಕ್ಕೆ ರೂಪಾ ರಾವ್ ಕೈ ಹಾಕಿದ್ದಾರೆ. ರೂಪಾ ರಾವ್ ಇನ್ಫೋಸಿಸ್ ಕಂಪನಿಯನ್ನು ಕೆಲವು ವರ್ಷಗಳ ಹಿಂದೆಯೇ ಬಿಟ್ಟು ನಿರ್ದೇಶನದಲ್ಲಿ ವ್ಯಾಸಂಗ ಮಾಡಿ ಈಗ ‘ಗಂಟುಮೂಟೆ’ ಕಟ್ಟಿಕೊಂಡು ಬಂದಿದ್ದಾರೆ. 1990ರ ದಶಕದ ವಿಚಾರ, ಅದರಲ್ಲೂ ಹೆಣ್ಣು ಮಕ್ಕಳ ಹಾಗೂ ಹೈಸ್ಕೂಲ್ ವಿದ್ಯಾರ್ಥಿನಿಯರ ಮನಸನ್ನು ಅವರು ಇಲ್ಲಿ ಸೆರೆ ಹಿಡಿದ್ದಾರೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಬೆಳವಾಡಿ ಅವರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು, ಟೆಂಟ್ ಸಿನಿಮಾದ ವಿದ್ಯಾರ್ಥಿ ನಿಶ್ಚಿತ್ ಕೋರೋಡಿಯನ್ನು ಲವರ್ ಬಾಯ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದ ರೂಪಾ ರಾವ್ ಮೂಲತಃ ಬೆಂಗಳೂರಿನವರು. ನ್ಯೂಯಾರ್ಕ್ ವೆಬ್ ಫೆಸ್ಟ್ 2006ರಲ್ಲಿ ಅವರ ವೆಬ್ ಸೀರೀಸ್ ‘ದಿ ಅಡರ್ ಲವ್ ಸ್ಟೋರಿ’ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದು ಟೊರೆಂಟೊ ವೆಬ್ ಫೆಸ್ಟ್‌ನಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿ ಪಡೆಯಿತು. ಭಾರತದ ಮೊಟ್ಟ ಮೊದಲ ಎರಡು ಹೆಣ್ಣು ಮಕ್ಕಳ ನಡುವಿನ ಪ್ರೇಮ ಕಥೆ 2006ರ ಔಟ್ಲುಕ್ ಪತ್ರಿಕೆ ಇವರನ್ನು ವರ್ಷದ ಮಹಿಳೆಯರು ವಿಶೇಷ ಅಂಕಣಕ್ಕೆ ಒಬ್ಬರನ್ನಾಗಿ ಗುರಿತಿಸಿತು. ನಂತರ ದೆಹಲಿಯಲ್ಲಿ ಸಿನಿಮಾ ಮೇಕಿಂಗ್ ಕಲಿತು, ಲಂಡನ್ನಲ್ಲಿ ಕೆಲಸ ಮಾಡಿ 2011 ರಿಂದ ಬೆಂಗಳೂರಿನಲ್ಲಿ ನೆಲಸಿರುವ ರೂಪಾ ರಾವ್ ಅವರಿಗೆ ಈಗ ಸಿನಿಮಾದ್ಧೇ ಧ್ಯಾನವಾಗಿದೆ.
ಅಮೆಯುಕ್ತಿ ಸ್ಟುಡಿಯೋವನ್ನ ಸಹದೇವ್ ಕೆಲವಾಡಿ ಜೊತೆ ಸೇರಿ ಸ್ಥಾಪನೆ ಮಾಡಿದ್ದು, ರೂಪಾ ರಾವ್ ಸಿನಿಮಾ ಕಲೆಯಡೆಗೆ ಶ್ರದ್ದೆಯಿಂದ ದುಡಿಯೋ ಛಲವಿರೋ ಕತೆಗಾರರಿಗೆ, ನಿರ್ದೇಶಕರಿಕೆ ವೇದಿಕೆ ಕೊಡುವ ಉದ್ದೇಶ ಹೊಂದಿದ್ದಾರೆ. ಕನ್ನಡದಲ್ಲಿ ತಯಾರಾದ ‘ಗಂಟುಮೂಟೆ’ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಕಥೆ. ಸೆನ್ಸಾರ್ ಆಗುವುದಕ್ಕೂ ಮುಂಚೆಯೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಆಯ್ಕೆ ಆಗಿ, ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದಿದ್ದು ಈಗ ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ಗೆ ಆಯ್ಕೆ ಆಗಿದೆ.