ಕನ್ನಡ ಚಿತ್ರರಂಗದಲ್ಲಿ 1970ರಲ್ಲಿ 'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಕರಾಟೆ ಕಿಂಗ್ ಶಂಕರ್ ನಾಗ್. ಈ ಸಿನಿಮಾ ಅಂದು ಯಶಸ್ವಿ ಕಾಣುವುದರ ಜೊತೆಗೆ ಶಂಕರ್ ನಾಗ್ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇದೀಗ ಸ್ಯಾಂಡಲ್ವುಡ್ನಲ್ಲಿ ಇದೇ ಹೆಸರಿನಲ್ಲಿ ಸಿನಿಮಾವೊಂದು ಬರಲಿದೆ.
ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಈ ಚಿತ್ರದ ಟ್ರೈಲರ್ ಅನ್ನು ಅಪ್ಪು ಬಾಡಿಗಾರ್ಡ್ ಆಗಿದ್ದ ಚಲಪತಿ ಮತ್ತು ಸಿರಿ ಮ್ಯೂಸಿಕ್ ಸಂಸ್ಥೆಯ ಚಿಕ್ಕಣ್ಣ ಬಿಡುಗಡೆ ಮಾಡಿದರು.
ಹಿರಿಯ ನಿರ್ದೇಶಕ ಭಗವಾನ್ ಬಳಿ ತರಬೇತಿ ಪಡೆದುಕೊಂಡಿರುವ ಎನ್. ಮಂಜುನಾಥ್ ಚಿತ್ರದ ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. 1980ರಲ್ಲಿ ಕರವಸ್ತ್ರದ ಮೂಲಕ ಆಗುವ ಪ್ರೀತಿ ಕತೆಯನ್ನು ಈ ಸಿನಿಮಾ ಹೇಳಲಿದೆ.
ನಾಯಕ ಮತ್ತು ನಾಯಕಿ ಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ. ಇಲ್ಲಿ ಕರ್ಚೀಫ್ ಮುಖ್ಯವಾದ ಪಾತ್ರ ಹೊಂದಿದೆ. ಅದು ಇಬ್ಬರನ್ನು ಹೇಗೆ ಸೇರಿಸುತ್ತದೆ, ಪ್ರೀತಿಯ ಸಂದೇಶ ಯಾವ ರೀತಿ ರವಾನೆಯಾಗುತ್ತಿರುತ್ತದೆ ಎಂಬ ವಿಷಯಗಳನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.
ಹರ್ಷ ಲಹನಿ ಚಿತ್ರದ ನಾಯಕಿ. ಇನ್ನುಳಿದಂತೆ ಶೋಭರಾಜ್, ಸಂಗೀತ, ನೀನಾಸಂ ಸತೀಶ್, ಜಿ. ತರುಣ್‌ಕುಮಾರ್ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ ಹೊನ್ನಾವರ ಸಾಹಿತ್ಯದ ನಾಲ್ಕು ಗೀತೆಗಳಿಗೆ ಯಶವಂತ್ ಭೂಪತಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಏಳು ಕೋಟೆಚಂದ್ರು, ಸಂಕಲನ ಸೆಲ್ವರಾಜು ವಿನೋದ್, ಸಾಹಸ ಅಲ್ಟಿಮೇಟ್ ಶಿವು, ನೃತ್ಯ ಲಕ್ಷೀತ್ ಅವರದ್ದಾಗಿದೆ.
ಇದನ್ನೂ ಓದಿ: ಗಾಯಕಿಯರಾದ ಪುತ್ರಿಯರಿಗೆ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಕೊಟ್ಟ ಸಲಹೆಯೇನು?
ಕನಕಪುರ, ಹಾರೋಹಳ್ಳಿ,ಆನೇಕಲ್, ತಟ್ಟಗೆರೆ, ಹೂಕ್ಲೇರಿ ಕಡೆಗಳಲ್ಲಿ ಚಿತ್ರೀಕರಣ ನಡೆದಿದ್ದು, ಕೊನೆಯ ಎರಡು ದಿನದ ಕ್ಲೈಮ್ಯಾಕ್ಸ್ ಅನ್ನು ಸಕಲೇಶಪುರದಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಆನೇಕಲ್ ಮೂಲದ ಟಿ.ಎಸ್. ಗೋಪಲ್ ಅವರು ಮುನಿ ಲಕ್ಷೀ ವೆಂಕಟೇಶ್ವರ ಕ್ರಿಯೆಶನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, ಅವರಿಗಿದು ಹೊಸ ಅನುಭವ. ಮುನೇಶ್, ಪ್ರಜ್ವಲ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಶಂಕರ್ ನಾಗ್ ಒಂದಾನೊಂದು ಕಾಲದಲ್ಲಿ ಚಿತ್ರಕ್ಕೂ, ಈ ಸಿನಿಮಾಗೂ ಯಾವುದೇ ಸಂಬಂಧ ಇರುವುದಿಲ್ಲ. ಸದ್ಯ ಟೈಟಲ್ನಿಂದ ಗಮನ ಸೆಳೆಯುತ್ತಿರೋ ಒಂದಾನೊಂದು ಕಾಲದಲ್ಲಿ ಸಿನಿಮಾ ಮೇಲೆ ಪ್ರೇಕ್ಷಕರು ಭಾರಿ ಕುತೂಹಲವನ್ನಿಟ್ಟುಕೊಂಡಿದ್ದಾರೆ..