'ರಾಮ ರಾಮ ರೇ' ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ಅವರ ದ್ವಿತೀಯ ಚಿತ್ರ 'ಒಂದಲ್ಲಾ ಎರಡಲ್ಲಾ' ಕೂಡಾ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡು ಕೆಲವೊಂದು ಸಿನಿಮಾ ಉತ್ಸವಗಳಿಗೂ ಎಂಟ್ರಿ ನೀಡಿತ್ತು.
ಹೆಬ್ಬುಲಿ ಚಿತ್ರವನ್ನು ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಉಮಾಪತಿ ನಿರ್ಮಾಣದ ಎರಡನೇ ಸಿನಿಮಾ. ದರ್ಶನ್ ಅಭಿನಯದಲ್ಲಿ ಉಮಾಪತಿ ರಾಬರ್ಟ್ ಸಿನಿಮಾ ನಿರ್ಮಿಸುತ್ತಿದ್ದಾರೆ. 'ಒಂದಲ್ಲಾ ಎರಡಲ್ಲಾ' ಸಿನಿಮಾ ಬಿಡುಗಡೆಯಾದಾಗ ಈ ಚಿತ್ರಕ್ಕೆ ದೊರೆಯಬೇಕಾದ ಮನ್ನಣೆ ದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಸಿನಿಮಾ ಮಕ್ಕಳ ಸಿನಿಮಾವಾಗಿದ್ದು ಈ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಮತ್ತೊಂದು ಮಕ್ಕಳ ಸಿನಿಮಾ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಬಿಡುಗಡೆಯಾಗಿತ್ತು.
'ಒಂದಲ್ಲಾ ಎರಡಲ್ಲಾ' ಬಿಡುಗಡೆಯಾದ ನಂತರ ರಾಜ್ಯ ಪ್ರಶಸ್ತಿ ಪಡೆಯಿತು. ಬಿಡುಗಡೆಯಾದ ಎರಡು ವರ್ಷಗಳ ನಂತರ ಇದೀಗ ಈ ಚಿತ್ರ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ. ಇದೊಂದು ರಾಷ್ಟ್ರೀಯ ಐಕ್ಯತೆ ಸಾರುವ ಚಿತ್ರವಾಗಿದ್ದು ರೋಹಿತ್ ಪಾಂಡವಪುರ, ಮಠ ಕೊಪ್ಪಳ, ಸಾಯಿ ಕೃಷ್ಣ ಕುಡ್ಲ, ರಂಜಾನ್ ಸಾಬ್ ಉಲ್ಲಾಗಡ್ಡಿ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ವಾಸುಕಿ ವೈಭವ್ ಹಾಗೂ ನೊಬಿನ್ ಪೌಲ್ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಸಿನಿಮಾ ಆಗಸ್ಟ್ 14 ರಿಂದ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಗೆ ಲಭ್ಯವಿದೆ.