ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ ಒಗ್ಗರಣೆ ಡಬ್ಬಿ ಕೂಡ ಒಂದು. ಸದ್ಯ ಈ ಕಾರ್ಯಕ್ರ ಮರು ಪ್ರಸಾರ ಆರಂಭಿಸಿದೆ. ಈಗಾಗಲೇ ಲಾಕ್ಡೌನ್ನಿಂದಾಗಿ ಒಂದಷ್ಟು ಹಳೆಯ ಕಾರ್ಯಕ್ರಮಗಳು ಮರು ಪ್ರಸಾರ ಆರಂಭಿಸಿರುವುದು ತಿಳಿದೇ ಇದೆ. ಇದೀಗ ವೀಕ್ಷಕರ ಒತ್ತಾಯಕ್ಕೆ ಮಣಿದು ಜೀ ವಾಹಿನಿ ಅಡುಗೆ ಕಾರ್ಯಕ್ರಮ ಒಗ್ಗರಣೆ ಡಬ್ಬಿಯನ್ನು ಮರು ಪ್ರಸಾರ ಮಾಡಲು ನಿರ್ಧರಿಸಿದೆ.

2013 ರಲ್ಲಿ ಮುರಳಿ ನಿರೂಪಣೆಯಲ್ಲಿ ಆರಂಭವಾದ ಒಗ್ಗರಣೆ ಡಬ್ಬಿ ಕಾರ್ಯಕ್ರಮ, ಬರೋಬ್ಬರಿ 5 ವರ್ಷಗಳ ಕಾಲ ಪ್ರಸಾರ ಕಂಡಿತ್ತು. ನವಿರಾದ ಹಾಸ್ಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಈ ಕಾರ್ಯಕ್ರಮ ಅನೇಕ ರೀತಿಯ ಅಡುಗೆಗಳನ್ನು ವೀಕ್ಷಕರಿಗೆ ಪರಿಚಯ ಮಾಡಿಕೊಟ್ಟಿತ್ತು.
5 ವರ್ಷಗಳಲ್ಲಿ ಸುಮಾರು 1750 ಸಂಚಿಕೆಗಳನ್ನು ಪ್ರಸಾರ ಮಾಡಿರುವ ಒಗ್ಗರಣೆ ಡಬ್ಬಿ, ಇಲ್ಲಿಯವರೆಗೆ ಸುಮಾರು ಆರೂವರೆ ಸಾವಿರದಷ್ಟು ರೆಸಿಪಿಗಳನ್ನು ವೀಕ್ಷಕರಿಗೆ ಪರಿಚಯಿಸಿದೆ. ಐದು ವರ್ಷ ಕೂಡಾ ಮುರಳಿಯವರೇ ನಿರೂಪಕರಾಗಿ ಕಾಣಿಸಿಕೊಂಡಿದ್ದು, ಸುಮಾರು ಎರಡೂವರೆ ಸಾವಿರದಷ್ಟು ಗೃಹಿಣಿಯರು ಈ ಒಗ್ಗರಣೆ ಡಬ್ಬಿಯಲ್ಲಿ ಭಾಗಿಯಾಗಿದ್ದಾರೆ.

ಪ್ರತಿದಿನವೂ ಹೊಸ ರೆಸಿಪಿಗಳನ್ನು ಪರಿಚಯಿಸಿರುವ ಮುರಳಿ, ಎಲ್ಲಾ ತರಹದ ಪಾಕಗಳನ್ನು ಮಾಡುವ ಬಗೆಯನ್ನು ತಿಳಿಸಿಕೊಟ್ಟಿದ್ದಾರೆ. ವೆಜ್, ನಾನ್ ವೆಜ್, ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಹಳ್ಳಿಯ ವಿವಿಧ ಅಡುಗೆಗಳು, ಐಸ್ ಕ್ರೀಮ್, ಚಾಕಲೇಟ್, ಸ್ನಾಕ್ಸ್, ಸಾಂಪ್ರದಾಯಿಕ ಅಡುಗೆಗಳು, ತಂದೂರು ತಿಂಡಿಗಳು, ಗ್ರಿಲ್ಡ್ ತಿಂಡಿಗಳಿ ಹೀಗೆ ನಾನಾ ನಮೂನೆಯ ಅಡುಗೆಗಳ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದರು. ಸದ್ಯ ಒಗ್ಗರಣೆ ಡಬ್ಬಿ ಮರು ಪ್ರಸಾರವಾಗುತ್ತಿದ್ದು, ಜೀ ಕನ್ನಡದಲ್ಲಿ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಪ್ರಸಾರವಾಗಲಿದೆ.