ಶಕೀಲ ಕುರಿತು ಬಯೋಪಿಕ್ ಬರುತ್ತದೆ ಎಂದರೆ ಸಹಜವಾಗಿಯೇ ಇದು ಸಹ ಸಿಲ್ಕ್ ಸ್ಮಿತಾ ಕುರಿತ 'ದಿ ಡರ್ಟಿ ಪಿಕ್ಚರ್' ಚಿತ್ರದ ತರಹ ಇರಬಹುದಾ ಎಂದು ಹೋಲಿಕೆ ಪ್ರಾರಂಭವಾಗುತ್ತದೆ. ಆದರೆ, 'ದಿ ಡರ್ಟಿ ಪಿಕ್ಚರ್' ಜತೆಗೆ ಹೋಲಿಕೆ ಬೇಡ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.
ಚಿತ್ರದ ಕುರಿತು ಮಾತನಾಡಿದ ಅವರು 'ಸಿಲ್ಕ್ ಸ್ಮಿತಾ ಅವರು ಐಟಂ ಡ್ಯಾನ್ಸರ್ ಆಗಿದ್ದವರು. ದೊಡ್ಡದೊಡ್ಡ ಹೀರೋಗಳ ಚಿತ್ರಗಳು ಸೋಲುವ ಸಂದರ್ಭದಲ್ಲಿ, ಸಿಲ್ಕ್ ಸ್ಮಿತಾ ಅವರ ಹಾಡನ್ನು ಹಾಕಿ ಕೊಂಡರೆ ಪಿಕ್ಚರ್ ಹಿಟ್ ಆಗೋದು. ಆದರೆ, ಶಕೀಲಾ ಹಾಗಲ್ಲ. ಅವರು ಮುಖ್ಯಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡವರು. ಹಾಗಾಗಿ ಶಕೀಲಾ ಮತ್ತು ಸ್ಮಿತಾ ಅವರನ್ನು ಹೋಲಿಸುವುದು ಸಾಧ್ಯವಿಲ್ಲ. 'ಡರ್ಟಿ ಪಿಕ್ಚರ್' ಚಿತ್ರ ನನಗೆ ಬಹಳ ಇಷ್ಟ. ವಿದ್ಯಾ ಬಾಲನ್ ಅಭಿನಯ ಬಹಳ ಇಷ್ಟ. ಆದರೆ, ಅವೆರೆಡೂ ಸಿನಿಮಾಗಳಿಗೆ ಯಾವುದೇ ಹೋಲಿಕೆ ಇಲ್ಲ. ಇದು ನಿಜವಾದ ಬಯೋಪಿಕ್. ಒಬ್ಬ ನಟಿಯ ಕಥೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರ' ಎನ್ನುತ್ತಾರೆ ಇಂದ್ರಜಿತ್.
ಇದನ್ನೂ ಓದಿ: ತಮ್ಮ ಕುರಿತಾದ ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬೇಸರ ಹೊರ ಹಾಕಿದ ಶಕೀಲಾ
ಶಕೀಲಾ ಅವರನ್ನು ಒಂದೂವರೆ ದಶಕದಿಂದ ನೋಡುತ್ತಿದ್ದರೂ, 'ಲವ್ ಯೂ ಆಲಿಯಾ' ಚಿತ್ರದ ಸಂದರ್ಭದಲ್ಲಿ ಇನ್ನಷ್ಟು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. 'ಆ ಚಿತ್ರದ ಸಂದರ್ಭದಲ್ಲಿ ಅವರ ಜೊತೆಗೆ ಬಹಳ ಸಮಯ ಕಳೆದೆ. ಅವರಿಂದ ಹಲವು ವಿಷಯಗಳನ್ನು ತಿಳಿದುಕೊಂಡೆ. ಅವೆಲ್ಲವನ್ನೂ ಇಟ್ಟುಕೊಂಡು ಕಥೆ ಮಾಡಿದ್ದೇನೆ. ಇದೊಂದು ಹಿಂದಿ ಸಿನಿಮಾ. ನಂತರ ನಾಲ್ಕು ಭಾಷೆಗಳಿಗೆ ಡಬ್ ಮಾಡಿದ್ದೇವೆ. ಇದುವರೆಗೂ ಹಲವು ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿದ್ದರೂ, ಯಾವ ಚಿತ್ರ ಸಹ ಅಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಈ ಚಿತ್ರವು ಸುಮಾರು ಎರಡು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ' ಎಂದು ಇಂದ್ರಜಿತ್ ತಿಳಿಸಿದ್ದಾರೆ.