`ಗುರು ಶಿಷ್ಯರು' ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಟಿಸುತ್ತಿರುವ ವಿಷಯ ಹೊಸದೇನಲ್ಲ. ಈಗಾಗಲೇ ಈ ವಿಷಯವನ್ನು ಚಿತ್ರತಂಡದವರು ಹೇಳಿಕೊಂಡಿದ್ದರು.
ಆದರೆ, ಅವರ ಪಾತ್ರವೇನು ಮತ್ತು ಚಿತ್ರದಲ್ಲಿ ಹೇಗೆ ಕಾಣುತ್ತಾರೆ ಎಂಬ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ. ಇಂದು ನಿಶ್ವಿಕಾ ಹುಟ್ಟುಹಬ್ಬದ ನೆಪದಲ್ಲಿ ಆಕೆಯ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಮೂಲಕ ನಿಶ್ವಿಕಾಗೆ ಚಿತ್ರತಂಡದವರು ಗಿಫ್ಟ್ ಕೊಟ್ಟಿದ್ದಾರೆ.
ಈ ಚಿತ್ರಕ್ಕೆ ನಿಶ್ವಿಕಾ ಆಯ್ಕೆಯಾಗಿದ್ದು ಅಷ್ಟೇನೂ ಸುಲಭವಾಗಿರಲಿಲ್ಲವಂತೆ. ಈ ಪಾತ್ರಕ್ಕಾಗಿ 30 ಹೊಸ ನಟಿಯರು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿರುವ ಒಂದಿಷ್ಟು ನಟಿಯರು ಮತ್ತು ಪರಭಾಷೆಯ ಹುಡುಗಿಯರನ್ನು ಈ ಪಾತ್ರಕ್ಕಾಗಿ ಪರಿಗಣಿಸಲಾಗಿತ್ತಂತೆ. ಕೊನೆಗೆ ಈ ಪಾತ್ರಕ್ಕೆ ನಿಶ್ವಿಕಾ ಸೂಕ್ತ ಎನ್ನುವ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಚಿತ್ರದಲ್ಲಿ ನಿಶ್ವಿಕಾ ಬರೀ ಹಳ್ಳಿಹುಡುಗಿಯಷ್ಟೇ ಅಲ್ಲ, ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯಾಗಿಯೂ ಕಾಣಿಸಿಕೊಂಡಿರುವುದು ವಿಶೇಷ. 90ರ ದಶಕದ ಕಥೆ ಇರುವ `ಗುರು ಶಿಷ್ಯರು' ಈಗಾಗಲೇ ಶೇ.60ರಷ್ಟು ಮುಗಿದಿದೆ.
ಚಿತ್ರವನ್ನು ಶರಣ್ ಮತ್ತು ತರುಣ್ ಸುಧೀರ್ ಜೊತೆಯಾಗಿ ನಿರ್ಮಿಸುತ್ತಿದ್ದು, ಜಡೇಶ್ ಹಂಪಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.