ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಸೂಪರ್ ಸ್ಟಾರ್' ಸಿನಿಮಾ ನಿಮಗೆ ಗೊತ್ತೇ ಇದೆ. ನೇಪಾಳ ರಾಜನ ಕಥೆ ಆಧರಿಸಿದ್ದ ಈ ಚಿತ್ರ ಹಿಟ್ ಆಗಿತ್ತು. ಚಿತ್ರಗಳ ಹಾಡುಗಳು ಕೂಡಾ ಇಂದಿಗೂ ಬಹಳ ಫೇಮಸ್. ಇದೀಗ ಇದೇ ಹೆಸರಿನಲ್ಲಿ ಹೊಸ ಸಿನಿಮಾ ತಯಾರಾಗುತ್ತಿದೆ.
18 ವರ್ಷಗಳ ನಂತರ ಈ ಸಿನಿಮಾ ಹೆಸರಿನಲ್ಲಿ ಉಪೇಂದ್ರ ತಮ್ಮ ಅಣ್ಣನ ಮಗ ನಿರಂಜನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಹೊರಟಿದ್ದಾರೆ. 'ಸೂಪರ್ ಸ್ಟಾರ್' ಚಿತ್ರದ ಮೂಲಕ ನಿರಂಜನ್ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.ಉಪ್ಪಿಯ ಕತ್ರಿಗುಪ್ಪೆ ಮನೆಯಲ್ಲಿ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಅಣ್ಣನ ಮಗನ ಚಿತ್ರದ ಟೈಟಲನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹೂವಿನ ಹುಡುಗಿ ಪ್ರಿಯಾಂಕ ಉಪೇಂದ್ರ ಲಾಂಚ್ ಮಾಡಿದರು.
3-4 ಸಿನಿಮಾಗಳನ್ನು ಮಾಡಿ ಸೂಪರ್ ಸ್ಟಾರ್ ಆಗೋದಲ್ಲ, ಮೊದಲ ಚಿತ್ರದಲ್ಲೇ ಸೂಪರ್ ಸ್ಟಾರ್ ಆಗೋಕ್ ಗಟ್ಸ್ ಬೇಕು, ಹಾರ್ಡ್ ವರ್ಕ್ ಮಾಡಿ ಒಳ್ಳೆ ಸಿನಿಮಾ ಮಾಡಿ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳಿ ಎಂದು ಉಪೇಂದ್ರ ತಮ್ಮ ಅಣ್ಣನ ಮಗ ನಿರಂಜನ್ ಹಾಗೂ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಅವರಿಗೆ ಶುಭ ಕೋರಿದರು.
'ಸೂಪರ್ ಸ್ಟಾರ್' ಚಿತ್ರ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಅವರಿಗೆ ಎರಡನೇ ಸಿನಿಮಾ. 'ಲಕ್ಷ್ಮಿತನಯ' ಚಿತ್ರದ ನಂತ್ರ ರಮೇಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆ್ಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತೆಲುಗು ಸ್ಟಾರ್ ಡೈರೆಕ್ಟರ್ ಸುಕುಮಾರ್ ಗರಡಿಯಲ್ಲಿ ಪಳಗಿರುವ ರಮೇಶ್, ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಉಪ್ಪಿ ಅಣ್ಣನ ಮಗನ ಜೊತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಚಿತ್ರದಲ್ಲಿ ನಿರಂಜನ್ ಇಂಟರ್ನ್ಯಾಷನಲ್ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸುತ್ತಿದ್ದು ಪಾತ್ರಕ್ಕಾಗಿ ದೇಹವನ್ನು ದಂಡಿಸಿ ಹುರಿಗೊಳಿಸಿದ್ದಾರೆ.
ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡಿರುವ ನಿರಂಜನ್, ಸಖತ್ ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಗಳಿಸಿದ್ದಾರೆ. 'ಸೆಕೆಂಡ್ ಹಾಫ್' ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿ ಕಾಣಿಸಿದ್ದ ನಿರಂಜನ್, ಈಗ ಕ್ಲಾಸ್ಗೂ ಓಕೆ , ಮಾಸ್ಗೂ ಓಕೆ ಅನ್ನೋ ರೀತಿ ಬಾಡಿಯನ್ನು ಫ್ಲೆಕ್ಸಿಬಲ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಸ್ಕ್ರಿಪ್ಟ್ ಕೆಲಸ ಮುಗಿಸಿದ್ದು ಆಗಸ್ಟ್ 20 ಕ್ಕೆ ನಿರಂಜನ್ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಲಾಂಚ್ ಮಾಡಲಿದ್ದಾರೆ. ಜೊತೆಗೆ , ಚಿತ್ರಕ್ಕೆ ನಾಯಕಿಯನ್ನು ಫೈನಲ್ ಮಾಡಿಕೊಂಡು ನವೆಂಬರ್ ವೇಳೆಗೆ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ.