ಸ್ಯಾಂಡಲ್ವುಡ್ ಯುವರಾಜ ಎಂದೇ ಖ್ಯಾತರಾದ ನಿಖಿಲ್ ಕುಮಾರಸ್ವಾಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 30 ನೇ ವಸಂತಕ್ಕೆ ಕಾಲಿಟ್ಟಿರುವ ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿಗಳು, ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಿನ್ನೆ ರಾತ್ರಿಯಿಂದಲೇ ನಿಖಿಲ್ ಬರ್ತಡೇ ಸಂಭ್ರಮ ಆರಂಭವಾಗಿದೆ.
ವಿಶೇಷ ಎಂದರೆ ಹುಟ್ಟುಹಬ್ಬದ ದಿನವೇ ನಿಖಿಲ್ ಅಭಿನಯಿಸಲಿರುವ ನಾಲ್ಕು ಹೊಸ ಸಿನಿಮಾಗಳು ಅನೌನ್ಸ್ ಆಗಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಖುಷಿ ತಂದಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ನಿರ್ಮಿಸುತ್ತಿರುವ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ. 'ಕುರುಕ್ಷೇತ್ರ' ನಂತರ ನಿರ್ಮಾಪಕ ಮುನಿರತ್ನ ಅವರೊಂದಿಗೆ ನಿಖಿಲ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ 'ಧನುಷ್ ಐಪಿಎಸ್' ಸಿನಿಮಾದ ಟೈಟಲ್ ಕೂಡಾ ರಿವೀಲ್ ಆಗಿದ್ದು ಚಿತ್ರದ ಫಸ್ಟ್ಲುಕ್ ಕೂಡಾ ಬಿಡುಗಡೆಯಾಗಿದೆ. ಈ ಚಿತ್ರದ ಟೈಟಲ್ ಹೇಳುವಂತೆ ನಿಖಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದಲ್ಲದೆ ನಿರ್ದೇಶಕ ಎ.ಪಿ. ಅರ್ಜುನ್ ನಿರ್ದೇಶನದಲ್ಲಿ ಕೂಡಾ ನಿಖಿಲ್ ಸಿನಿಮಾ ಮಾಡಲಿದ್ದು ಈ ಸಿನಿಮಾ ಟೈಟಲ್ ರಿವೀಲ್ ಮಾಡಿಲ್ಲ. ನಾಲ್ಕೂ ಚಿತ್ರತಂಡ ಕೂಡಾ ನಿಖಿಲ್ ಬರ್ತಡೇಗೆ ವಿಶ್ ಮಾಡಿದೆ. ಒಟ್ಟಿನಲ್ಲಿ ರಾಜಕೀಯದ ನಡುವೆ ಬಿಡುವು ಮಾಡಿಕೊಂಡು ಈ ವರ್ಷ ನಿಖಿಲ್ ಸಿನಿಮಾಗಳತ್ತ ಮುಖ ಮಾಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.