ಎಷ್ಟೋ ನಿರ್ದೇಶಕ, ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆಡಿಷನ್ ಮಾಡಿ ಸೂಕ್ತ ಪ್ರತಿಭೆಗಳನ್ನು ಆರಿಸಿ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಈ ರೀತಿ ಆಡಿಷನ್ಗಳಿಂದ ಎಷ್ಟೋ ಎಲೆ ಮರೆ ಕಾಯಿಯಂತಿದ್ದ ಪ್ರತಿಭೆಗಳು ಈಗ ಸಿನಿಮಾದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ‘ಯುವರತ್ನ’ ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸ ಕಲಾವಿದರನ್ನು ಗುರುತಿಸುವ ಸಲುವಾಗಿ ಪ್ರತಿಭಾನ್ವೇಷಣೆ ನಡೆಸಿ ಕಾಲೇಜಿನ ಸನ್ನಿವೇಶಗಳಿಗೆ ಹಲವರನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಸೆಂಚುರಿ ಸ್ಟಾರ್ ಡಾ. ಶಿವರಾಜ್ಕುಮಾರ್ ಅವರ ಮುಂದಿನ ಸಿನಿಮಾ ‘ಆರ್ಡಿಎಕ್ಸ್’ ಗಾಗಿ ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ಕೂಡಾ ಹೊಸ ಕಲಾವಿದರನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆ ಫೆಬ್ರವರಿ 8, 9 ರಂದು ಬೆಳಗ್ಗೆ 9 - 6 ಗಂಟೆವರೆಗೆ ನಗರದ ಶ್ರೀ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಯುತ್ತಿದೆ. ಡಾ. ಶಿವರಾಜ್ಕುಮಾರ್ ಜೊತೆ ನಟಿಸುವ ಆಸೆಯಿಂದ ಆ ಎರಡು ದಿನಗಳು ಕೂಡಾ ಹೊಸ ಪ್ರತಿಭೆಗಳು ಆಡಿಷನ್ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಖಂಡಿತ.

ಸತ್ಯ ಜ್ಯೋತಿ ಫಿಲ್ಮ್ಸ್ 1982 ರಲ್ಲಿ ಆರಂಭವಾಗಿದ್ದು ‘ಮುನ್ದ್ರಾಮ್ ಪಿರ್ರೈ’ ತಮಿಳು ಸಿನಿಮಾವನ್ನು ಮೊದಲ ಬಾರಿಗೆ ನಿರ್ಮಿಸಿತು. ಅಂದಿನಿಂದ ಇಂದಿನವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದೆ. 1986 ರಲ್ಲಿ ಡಾ. ವಿಷ್ಣುವರ್ಧನ್ ಹಾಗೂ ಸುಮಲತಾ ಜೋಡಿಯಾಗಿ ಅಭಿನಯಿಸಿರುವ 'ಸತ್ಯಜ್ಯೋತಿ' ಎಂಬ ಚಿತ್ರವನ್ನು ನಿರ್ಮಿಸಿತ್ತು. ಈ ಸಿನಿಮಾವನ್ನು ದಿನೇಶ್ ಬಾಬು ನಿರ್ದೇಶಿಸಿದ್ದರು. 'ಆರ್ಡಿಎಕ್ಸ್' ಸಿನಿಮಾಗಾಗಿ ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ಕನ್ನಡಕ್ಕೆ ಬರುತ್ತಿದ್ದಾರೆ. ಆಡಿಷನ್ನಲ್ಲಿ ಆಯ್ಕೆಯಾಗಿ ಶಿವಣ್ಣ ಜೊತೆ ನಟಿಸಲು ಯಾರಿಗೆ ಅದೃಷ್ಟ ದೊರೆಯಲಿದೆಯೋ ಕಾದು ನೋಡಬೇಕು.