ಕಳೆದ ಫೆಬ್ರವರಿಯಲ್ಲಿ ಹಿರಿಯ ನಟ ಸುನಿಲ್ ಪುರಾಣಿಕ್ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ವಾರ್ತಾ ಇಲಾಖೆ ಸಹಯೋಗದೊಂದಿಗೆ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಬಿಟ್ಟರೆ ನಂತರ ಕೊರೊನಾ ಕಾರಣದಿಂದ ಬೇರೆ ಯಾವ ಕಾರ್ಯಕ್ರಮ ಕೂಡಾ ನಡೆಯಲಿಲ್ಲ.
ಆದರೆ ಸುನಿಲ್ ಪುರಾಣಿಕ್ ಕೊರೊನಾ ಸಮಯದಲ್ಲಿ ಮುಂದೆ ನಿಂತು ರಾಜ್ಯದ ಸಿಎಂ ಯಡಿಯೂರಪ್ಪ ಅವರ ಮೂಲಕ ಸಂಕಷ್ಟದಲ್ಲಿರುವ ಸಿನಿಕಾರ್ಮಿಕರಿಗೆ ತಲಾ 3000 ರೂಪಾಯಿ ಹಣ ದೊರೆಯುವಂತೆ ಮಾಡಿದ್ದರು. ಇದೀಗ 7 ತಿಂಗಳ ಬಳಿಕ ಸುನಿಲ್ ಪುರಾಣಿಕ್ ಚಲನಚಿತ್ರ ಅಕಾಡೆಮಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯಿಂದ ಅಧಿಕೃತ ಪತ್ರ ಕೂಡಾ ಬಂದಿದೆ.
ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್, ನಟಿ ಸೋನು ಗೌಡ, ಹಿರಿಯ ಪತ್ರಕರ್ತೆ ಎಸ್.ಜಿ ತುಂಗಾ ರೇಣುಕ, ಪಿ. ಉಮೇಶ್ ನಾಯಕ್, ಪಾಲ್ ಸುದರ್ಶನ್, ಕೆ. ಪ್ರದೀಪ್ ಕುಮಾರ್ ಶೆಟ್ಟಿ, ಶ್ರೀರಾಜ್ ಗುಡಿ ಈಗ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಇದರಲ್ಲಿ ಇಬ್ಬರು ಸದಸ್ಯರು ಉಡುಪಿ ಜಿಲ್ಲೆಗೆ, ಉಳಿದಂತೆ ಐವರು ಬೆಂಗಳೂರಿನ ನಿವಾಸಿಗಳು. ಕರ್ನಾಟಕ ಸರ್ಕಾರ ಅಧೀನ ಕಾರ್ಯದರ್ಶಿ ಜಯಶ್ರೀ ಎಸ್. ಎನ್ ಸೆಪ್ಟೆಂಬರ್ 9 ರಂದು ಆದೇಶಕ್ಕೆ ಸಹಿ ಮಾಡಿದ್ದಾರೆ