ಇತ್ತೀಚಿನ ದಿನಗಳಲ್ಲಿ ಹಿರಿತೆರೆ ನಟ-ನಟಿಯರಿಗೆ ಕಿರುತೆರೆಯಲ್ಲಿ ಅತಿಥಿಗಳಾಗಿ ನಟಿಸುವುದು ಕಾಮನ್ ಆಗಿದೆ. ಆದ್ರೆ ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ನ ನಟ ಕಿರುತೆರೆಯಲ್ಲಿ ಮುಖ್ಯ ಭೂಮಿಕೆಯ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.
ಹೌದು, ಸಿನಿಮಾಗಳಿಂದ ದೂರವಿದ್ದ ಸಾಹಸಸಿಂಹ, ದಿ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಜತ್ಕರ್ ಈಗ ಕಿರುತೆರೆ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ 'ಜೊತೆ ಜೊತೆಯಲಿ' ಎಂಬ ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರವಾಹಿಯಲ್ಲಿ ಅನಿರುದ್ಧ್ ನಾಯಕ ನಟನಾಗಿ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ.
ಜೀ ಕನ್ನಡ ವಾಹಿನಿಯೂ 2014ರಲ್ಲಿ ಹೊಸ ರೀತಿಯ ಆಲೋಚನೆಗೆ ದಾರಿ ಮಾಡಿಕೊಡಲು, ಗಾಂಧೀಜಿಗೆ ಕಸ್ತೂರ ಬಾ, ಸಚಿನ್ಗೆ ಅಂಜಲಿ, ಅಭಿಷೇಕ್ಗೆ ಐಶ್ವರ್ಯಾ ಜೊತೆಯಾಗುವುದಾದರೆ 26 ವರ್ಷದ ಅಭಯ್ಗೆ 31 ವರ್ಷದ ಶಾಲಿನಿ ಯಾಕೆ ಜೊತೆಯಾಗಬಾರದು ಎಂಬ ಕಥೆಯೊಂದಿಗೆ 'ಜೊತೆ ಜೊತೆಯಲಿ' ಎಂಬ ಧಾರವಾಹಿಯನ್ನ ನಿರೂಪಿಸಿತ್ತು. ಇದೀಗ ಹೆಚ್ಚು ಟಿಆರ್ಪಿ ಗಳಿಸಿದ್ದ ಧಾರಾವಾಹಿಯ ಹೆಸರನ್ನೇ ಇಟ್ಟುಕೊಂಡು ಹೊಸ ಪಾತ್ರವರ್ಗದೊಂದಿಗೆ ಮತ್ತೆ ಸೀರಿಯಲ್ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಕಮಾಲ್ ಮಾಡಲು ಹೊರಟಿದೆ ಎನ್ನಬಹುದು.
ಹಳೆ ಹೆಸರಿನ ಹೊಸ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ಗೆ 45 ವರ್ಷ ಮತ್ತು ನಾಯಕಿ ಅನುಗೆ 20 ವರ್ಷ. ಇಬ್ಬರದೂ ಬೇರೆ ಬೇರೆ ಮನಸ್ಥಿತಿ. ನಾಯಕಿ ಅನು ಮನೆಯಲ್ಲಿ ಅವಳಿಗೆ ಮದುವೆ ಮಾಡಲು ತಾಯಿ ಒತ್ತಾಯಿಸುತ್ತಿರುತ್ತಾರೆ. ಮತ್ತೊಂದೆಡೆ ನಾಯಕ ಆರ್ಯವರ್ಧನ್ಗೂ ವಯಸ್ಸಾಯಿತು ಎಂಬ ಚಿಂತೆ. ಮಾನಸಿಕವಾಗಿ ಬೇರೆ ಬೇರೆ ಜಗತ್ತು ಮತ್ತು ಜನರೇಷನ್ ಗ್ಯಾಪ್ ಇರುವ ಎರಡು ಜೀವಗಳನ್ನು ಹೊಂದಿರುವ ಕಥೆ 'ಜೊತೆ ಜೊತೆಯಲಿ' ಧಾರವಾಹಿಯಾಗಿದೆ.
ಒಟ್ಟಿನಲ್ಲಿ, ಇಷ್ಟು ಕಾಲ ಸಿನಿಮಾಗಳಲ್ಲಿ ನೋಡಿದ್ದ ಅನಿರುದ್ಧ ಜತ್ಕರ್ ಅವರನ್ನು ಇನ್ಮುಂದೆ ಸೀರಿಯಲ್ ಮೂಲಕ ಮನೆಮನೆಗಳಲ್ಲಿ ನೋಡಬಹುದು.
ಸೀರಿಯಲ್ ಪ್ರೇಕ್ಷಕರು ಹೊಸ 'ಜೊತೆ ಜೊತೆಯಲಿ'ಯಲ್ಲಿ ಅನು ಮತ್ತು ಆರ್ಯವರ್ಧನ್ರಿಬ್ಬರೂ ಮದುವೆಯಾಗ್ತಾರಾ? ಜನರೇಶನ್ ಗ್ಯಾಪ್ ಬರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.