ಹಿರಿಯ ನಟಿ ವಿನಯಾ ಪ್ರಸಾದ್ ಅವರ ಕಿರಿಯ ಸಹೋದರ ರವಿಭಟ್ ಗೌರವಾನ್ವಿತ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈಗ ಅವರ ಪುತ್ರಿ ಕೃಷ್ಣಾ ಭಟ್ ‘ಸವರ್ಣಧೀರ್ಘಸಂಧಿ’ ಚಿತ್ರದ ಮುಖಾಂತರ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ತುಳು ಭಾಷೆಯ 'ಚಾಲಿ ಪೋಲಿಲು' ಸಿನಿಮಾವನ್ನು ನಿರ್ದೇಶಿಸಿದ್ದ ವಿರೇಂದ್ರ ಶೆಟ್ಟಿ ‘ಸವರ್ಣಧೀರ್ಘಸಂಧಿ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಅವರೇ ನಾಯಕರಾಗಿ ನಟಿಸುತ್ತಿದ್ದಾರೆ. ವಿರೇಂದ್ರ ಶೆಟ್ಟಿಗೆ ಕೃಷ್ಣಾ ಭಟ್ ಜೊತೆಯಾಗಿ ನಟಿಸಿದ್ದಾರೆ.
ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಹೊಟೆಲ್ ಮ್ಯಾನೇಜ್ಮೆಂಟ್ ಪದವಿ ಪಡೆದ ನಂತರ ರೆಸ್ಟೋರೆಂಟ್ ಆರಂಭಿಸಬೇಕು ಎಂದು ಕೃಷ್ಣಾ ಅಂದುಕೊಂಡಿದ್ರಂತೆ. ಅವಕಾಶ ಸಿಕ್ಕಾಗ ಮಾಡೆಲಿಂಗ್ನಲ್ಲಿ ಕೂಡಾ ಭಾಗವಹಿಸುತ್ತಾ ಕೆಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆನಂತರ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಅಪ್ಪನಂತೆ ಮಗಳು ಎನ್ನುವುದಕ್ಕೆ ಕೃಷ್ಣ ಭಟ್ ಕೂಡಾ ಸಾಕ್ಷಿ ಎನ್ನಬಹುದು. ಒಳ್ಳೆ ಕಥೆಗಳಿರುವ ಸಿನಿಮಾಗಳು ಸಿಗುವುದು ಅದೃಷ್ಟ. ‘ಸವರ್ಣಧೀರ್ಘಸಂಧಿ’ ಸಿನಿಮಾಗೆ ಆಫರ್ ಬಂದಾಗ ಅಪ್ಪನ ಜೊತೆ ಹೋಗಿ ಕಥೆ ಕೇಳಿದ್ದೆ. ಅವರ ಒಪ್ಪಿಗೆ ಪಡೆದ ನಂತರವೇ ಈ ಪಾತ್ರಕ್ಕೆ ಒಪ್ಪಿಕೊಂಡದ್ದು. ಈ ಚಿತ್ರದಲ್ಲಿ ನನ್ನದು ಸಂಗೀತ ನಿರ್ದೇಶಕರ ಮಗಳ ಪಾತ್ರ. ನನ್ನ ಅಪ್ಪ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ.
‘ಸವರ್ಣಧೀರ್ಘ ಸಂಧಿ’ ಚಿತ್ರವನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ದೇಶಕ ವಿರೇಂದ್ರ ಶೆಟ್ಟಿ ಪ್ಲಾನ್ ಮಾಡಿಕೊಂಡಿದ್ದಾರೆ. ಮೆಲೋಡಿ ಕಿಂಗ್ ಮನೋಮೂರ್ತಿ ಅವರು ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಆನೇಕಲ್, ಬೆಂಗಳೂರು, ಮೂಡಿಗೆರೆ ಹಾಗೂ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.