ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಮಹಿಳೆ ಪಾತ್ರದಲ್ಲಿ ನಟಿಸಿರುವ ಹಾಟ್ ಬೆಡಗಿ ಶುಭ ಪೂಂಜಾ ಹಾಗೂ ಪುಟ್ಟಗೌರಿ ಖ್ಯಾತಿಯ ರಕ್ಷ್ ಅಭಿನಯದ 'ನರಗುಂದ ಬಂಡಾಯ' ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಮಾರ್ಚ್12ಕ್ಕೆ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
'ನರಗುಂದ ಬಂಡಾಯ' 1980ರಲ್ಲಿ ನಡೆದ ನರಗುಂದ ರೈತರ ಹೋರಾಟದ ಕುರಿತಾದ ಚಿತ್ರ. ರೈತರ ಈ ಬಂಡಾಯ ವಿಕೋಪಕ್ಕೆ ತಿರುಗಿ ಪೊಲೀಸರ ಗೋಲಿಬಾರ್ಗೆ ನವಲಗುಂದದ ರೈತ ಮುಖಂಡ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಹಾಗೂ ಲಕ್ಕುಂಡಿ ಬಲಿಯಾಗಿದ್ದರು. ಈ ಕಥೆ ಆಧರಿಸಿ ಈಗ ನಿರ್ದೇಶಕ ನಾಗೇಂದ್ರ ಮಾಗಡಿ, ನರಗುಂದ ಬಂಡಾಯ ಚಿತ್ರ ಮಾಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರದಲ್ಲಿ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಪಾತ್ರದಲ್ಲಿ ಪುಟ್ಟಗೌರಿ ಸೀರಿಯಲ್ ಖ್ಯಾತಿಯ ರಕ್ಷ್ ನಟಿಸಿದ್ದು, ನಾಯಕಿಯಾಗಿ ಶುಭ ಪೂಂಜಾ ನಟಿಸಿದ್ದಾರೆ. ಈ ಚಿತ್ರಕ್ಕೆ ಎಸ್ ಜಿ ಸಿದ್ದೇಶ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಯಶೋವರ್ಧನ್ ಸಂಗೀತ ನೀಡಿದ್ದಾರೆ. ಸಂಭಾಷಣೆಕಾರ ಕೇಶವಾದಿತ್ಯ ಮೂರು ಹಾಡುಗಳನ್ನು ಬರೆದಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾ ಬಳಗವಿದ್ದು, ಸಾಧುಕೋಕಿಲ, ನೀನಾಸಂ ಅಶ್ವತ್ಥ್, ಅವಿನಾಶ್, ಭವ್ಯ, ರವಿಚೇತನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.