ಟಾಲಿವುಡ್ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಕಳೆದ 30 ವರ್ಷಗಳಿಂದ ಬೆಳ್ಳಿತೆರೆಯಲ್ಲಿ ನಾಯಕನಾಗಿ ಮಿಂಚಿದವರು. ಈಗ ಅವರಿಗೆ 59 ವರ್ಷ. ಈಗಲೂ ಕೂಡಾ ವಿಭಿನ್ನ ಪಾತ್ರ ಹಾಗೂ ಗೆಟಪ್ನಲ್ಲಿ ಸಿನಿಮಾಗಳಲ್ಲಿ ನಟಿಸುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಬಾಲಕೃಷ್ಣ ಸಿನಿಮಾ ಜೊತೆಗೆ ಸಾಮಾಜಿಕ ಸೇವೆಯನ್ನು ಕೂಡಾ ಮಾಡುತ್ತಿದ್ದಾರೆ. ಬಡವರಿಗೆ ಧನ ಸಹಾಯ ಮಾಡುವ ಮೂಲಕ ಔದಾರ್ಯತೆ ಮೆರೆದಿದ್ದಾರೆ. ಅನಂತಪುರ್ ಜಿಲ್ಲೆಗೆ ಸೇರಿದ ಯುವತಿವೋರ್ವಳು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಆಕೆ ಹೈದರಾಬಾದ್ನಲ್ಲಿರುವ ಬಸವತಾರಕಂ ಇಂಡೋ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಚಿಕಿತ್ಸೆಗೆ ಹಣ ಖರ್ಚು ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಬಾಲಕೃಷ್ಣ ಈ ಯುವತಿಗೆ ಧನಸಹಾಯ ಮಾಡಿದ್ದು, ಆಕೆ ಚಿಕಿತ್ಸೆಗೆ ಬೇಕಾದ ಮೊತ್ತವನ್ನು ತಾವೇ ಭರಿಸಿದ್ದಾರೆ.
ಇತ್ತೀಚೆಗೆ ಬಾಲಕೃಷ್ಣ ಆಸ್ಪತ್ರೆಗೆ ತೆರಳಿ ಆ ಯುವತಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಅಲ್ಲದೆ, ಆಕೆಯ ಕುಟುಂಬದವರೊಂದಿಗೆ ಕೆಲಹೊತ್ತು ಸಮಯ ಕಳೆದಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ.