ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ 'ವೆಡ್ಡಿಂಗ್ ಗಿಫ್ಟ್' ಚಿತ್ರದ(Wedding Gift Cinema)ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಹನುಮಂತನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರದ ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ (Director Nagathihalli Chandrashekar clap)ಮಾಡಿ, ಹೊಸ ತಂಡಕ್ಕೆ ಶುಭ ಹಾರೈಸಿದರು. ನಟಿ ಪ್ರೇಮಾ ಕ್ಯಾಮರಾಗೆ ಚಾಲನೆ ನೀಡಿದರು.
ಸಿನಿಮಾದ ಬಗ್ಗೆ ಮಾತನಾಡಿದ ಯುವ ನಟ ನಿಶಾನ್ ನಾಣಯ್ಯ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಕಥೆ ಹಾಗೂ ಪಾತ್ರ ಇಷ್ಟವಾಯಿತು. ಆದ್ದರಿಂದ ಸಿನಿಮಾ ಒಪ್ಪಿದ್ದೇನೆ ಎಂದರು.
ನಟಿ ಸೋನು ಗೌಡ ಮಾತನಾಡಿ, ನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದ್ದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯ ಮಧ್ಯೆ ಅಹಂ ಎನ್ನುವುದು ಬರಕೂಡದು. ಅದು ಬಂದಾಗ ಏನಾಗುತ್ತದೆ ಎಂಬುದೇ ಈ ಸಿನಿಮಾದ ಕಥಾಹಂದರ ಎಂದು ಹೇಳಿದರು.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಳಿ ಹಲವಾರು ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿರೋ ನಿರ್ದೇಶಕ ವಿಕ್ರಂಪ್ರಭು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಿರಿಯ ನಟಿ ಪ್ರೇಮಾ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದಾರೆ.
ಪವಿತ್ರಾ ಲೋಕೇಶ್, ಯಮುನಾ ಶ್ರೀನಿಧಿ ಮುಂತಾದವರು ಸಿನಿಮಾದಲ್ಲಿದ್ದಾರೆ. ಬಾಲಚಂದ್ರ ಪ್ರಭು ಸಂಗೀತ ನೀಡಿದ್ದರೆ, ಛಾಯಾಗ್ರಾಹಕರಾಗಿ ಉದಯಲೀಲ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ 45 ದಿನಗಳ ಮೊದಲ ಹಂತದ ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಲಾಗಿದೆ.