ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಅಭಿನಯದ 'ಬಿಚ್ಚುಗತ್ತಿ ಭರಮಣ್ಣ ನಾಯಕ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಮುನ್ನ ರಾಜವರ್ಧನ್ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರೂ ಆ ಸಿನಿಮಾಗಳು ಅವರಿಗೆ ಹೆಸರು ನೀಡಿರಲಿಲ್ಲ. ಆದರೆ ಈ ಚಿತ್ರ ಅವರಿಗೆ ಬ್ರೇಕ್ ನೀಡುವಂತ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

'ಬಿಚ್ಚುಗತ್ತಿ ಭರಮಣ್ಣ ನಾಯಕ' ಸಿನಿಮಾ ಇದೇ ತಿಂಗಳ 28 ರಂದು ಬಿಡುಗಡೆಯಾಗುತ್ತಿದೆ. ರಾಜವರ್ಧನ್ ಬಗ್ಗೆ ಸ್ಯಾಂಡಲ್ವುಡ್ನ ಸಾಕಷ್ಟು ಗಣ್ಯರು ಭರವಸೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರಿಗೆ ಕೂಡಾ ರಾಜವರ್ಧನ್ ಮೇಲೆ ಸಾಕಷ್ಟು ಭರವಸೆ ಇದೆ ಎಂಬುದು ಅವರ ಮಾತಿನಿಂದ ತಿಳಿಯುತ್ತದೆ. ಐತಿಹಾಸಿಕ ಸಿನಿಮಾ ಮಾಡುವುದು ಅಷ್ಟು ಸುಲಭದ ಮಾತಲ್ಲ. ರಾಜವರ್ಧನ್ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರ ಮೈಕಟ್ಟು, ನೋಟ, ಅಭಿನಯ ಚಾತುರ್ಯ ಸೊಗಸಾಗಿದೆ. ಈ ಹುಡುಗ ಮುಂದಿನ ದಿನಗಳಲ್ಲಿ ಒಳ್ಳೆ ನಾಯಕ ಆಗಿ ಮಿಂಚಲಿದ್ದಾನೆ ಎಂದು ಹಂಸಲೇಖ ಹೊಗಳಿದ್ದಾರೆ. ಅಲ್ಲದೆ ರಾಜವರ್ಧನ್ ಕುರಿತು 'ನೀನು ಯಾವಾಗಲೂ ನಿರ್ಮಾಪಕರಿಗೆ ಸಿಗುವಂತ ನಟ ಆಗಬೇಕು. ಒಂದು ಸಿನಿಮಾದಿಂದ ಬೀಗುವುದು ಸರಿಯಲ್ಲ' ಎಂದು ಕಿವಿಮಾತು ಹೇಳಿದ್ದಾರೆ.
'ಬಿಚ್ಚುಗತ್ತಿ’ ಮೆಚ್ಚುಗತ್ತಿ ಆಗುವುದಕ್ಕೆ ಹಲವಾರು ವಿಷಯಗಳಿವೆ. ನಮ್ಮ ಕನ್ನಡ ನಾಡಿನಲ್ಲಿ ಇಂತಹ ಪಾಳೆಗಾರರ ಕಥೆ ಬಹಳಷ್ಟಿದೆ. ಅವುಗಳನ್ನು ಇಂದಿನ ತಂತ್ರಜ್ಞಾನಕ್ಕೆ ಚೆನ್ನಾಗಿ ಹೊಂದಿಸಿಕೊಳ್ಳಬಹುದು. ಇನ್ನು ಹಂಸಲೇಖ 'ಬಿಚ್ಚುಗತ್ತಿ' ಚಿತ್ರಕ್ಕೆ ಶುಭ ಕೋರಿರುವುದಕ್ಕೆ ಕಾರಣ ಕೂಡಾ ಇದೆ. ಚಿತ್ರವನ್ನು ಮೊದಲು ಆರಂಭಿಸಿದ್ದು ಹಂಸಲೇಖ ಅವರೇ. ನಿರ್ದೇಶಕ ಆಗಿ ಕೆಲವು ದಿನಗಳ ಕಾಲ ಕೆಲಸ ಮಾಡಿ ನಂತರ ಆ ಜವಾಬ್ದಾರಿಯನ್ನು ಹರಿ ಸಂತು ಅವರಿಗೆ ವಹಿಸಿದರು.