ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ಚರಣ್ ತೇಜ ಅಭಿನಯದ 'ಮಗಧೀರ' ಚಿತ್ರದಲ್ಲಿ ಬಂಗಾರು ಕೋಡಿ ಪೆಟ್ಟ....ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದ ಮುಮೈತ್ ಖಾನ್ ಸಿನಿಪ್ರಿಯರಿಗೆ ಬಹಳ ಪರಿಚಯ. ಇದೀಗ ಈಕೆ ಸುದ್ದಿಯಲ್ಲಿದ್ದಾರೆ. ಆದರೆ ಸಿನಿಮಾ ಮೂಲಕ ಅಲ್ಲ, ಕಾರು ಚಾಲಕರೊಬ್ಬರಿಗೆ ಮುಮೈತ್ ಖಾನ್ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊರೊನಾ ಸಮಯದಲ್ಲಿ ಮುಮೈತ್ ಖಾನ್ ಗೋವಾ ಹಾಗೂ ಇನ್ನಿತರ ಸ್ಥಳಗಳಿಗೆ ಟ್ರಿಪ್ ಹೋಗಲು ನಿರ್ಧರಿಸಿ ರಾಘವ್ ರಾಜು ಅವರ ವಾಹನವನ್ನು ಮೂರು ದಿನಗಳ ಮಟ್ಟಿಗೆ ಬುಕ್ ಮಾಡಿದ್ದಾರೆ. ಆದರೆ 3 ದಿನಗಳ ಬದಲು ಅಲ್ಲಿ ಇಲ್ಲಿ ಸುತ್ತಲಾಗಿ 8 ದಿನಗಳಾಗಿವೆ. ಹೈದರಾಬಾದ್ ಹೋದ ನಂತರ ಒಟ್ಟಿಗೆ ದುಡ್ಡು ಕೇಳಿದರಾಯ್ತು ಎಂದು ಚಾಲಕ ಸುಮ್ಮನಾಗಿದ್ದಾನೆ.
ಟ್ರಿಪ್ ಮುಗಿದ ನಂತರ ಹೈದರಾಬಾದ್ಗೆ ಬಂದ ನಂತರ ಕಾರು ಚಾಲಕ 15,000 ಫೈನಲ್ ಬಿಲ್ ನೀಡಿದ್ದಾನೆ. ಆದರೆ ಮುಮೈತ್ ಖಾನ್ ಹಣ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಎಷ್ಟು ಮನವಿ ಮಾಡಿದರೂ ಹಣ ನೀಡದಿದ್ದಾಗ ಕಾರು ಚಾಲಕ ಮಾಧ್ಯಮಗಳ ಮುಂದೆ ಬಂದು ನಿಂತಿದ್ದಾರೆ. ಪ್ರವಾಸ ಹೋದ ಸ್ಥಳಗಳ ಫೋಟೋ, ಟೋಲ್ನಲ್ಲಿ ನೀಡಿದ ಬಿಲ್ ಎಲ್ಲಾ ಸಾಕ್ಷಿಗಳು ಕಣ್ಣ ಮುಂದೆ ಇದ್ದರೂ ಮುಮೈತ್ ಖಾನ್ ಮಾತ್ರ ಈಗಲೂ ಸುಮ್ಮನಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
ತಮಿಳು, ತೆಲುಗಿನ ಅನೇಕ ಹಾಡುಗಳಲ್ಲಿ ಹೆಜ್ಜೆ ಹಾಕಿರುವ ಮುಮೈತ್ ಖಾನ್ ಕನ್ನಡದ ಒರಟ ಐಲವ್ ಯು, ಸಿಟಿಜನ್, ರಾಜಧಾನಿ, ರಾಜ್ ದಿ ಶೋ ಮ್ಯಾನ್, ಸ್ವಯಂಕೃಷಿ, ದಂಡ್ಯಪಾಳ್ಯಂ 4 ಸೇರಿ ಕೆಲವೊಂದು ಸಿನಿಮಾಗಳ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.