ಮಾಜಿ ಡಾನ್, ದಿವಂಗತ ಮುತ್ತಪ್ಪ ರೈ ಅವರ ಜೀವನದ ಕೆಲವು ಘಟನೆಗಳನ್ನಾಧರಿಸಿ ರವಿ ಶ್ರೀವತ್ಸ ನಿರ್ದೇಶಿಸುತ್ತಿರುವ 'ಎಂಆರ್' ಚಿತ್ರಕ್ಕೆ ಆರಂಭದಲ್ಲೇ ಕಂಟಕ ಎದುರಾಗಿದೆ. ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿತ್ತು. ಚಿತ್ರತಂಡವು ಜನವರಿಯಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಈ ನಡುವೆ 'ಕಾಲೇಜ್ ಕುಮಾರ್' ಮತ್ತು 'ಜಾನ್ ಜಾನಿ ಜನಾರ್ಧನ್' ಚಿತ್ರಗಳನ್ನು ನಿರ್ಮಿಸಿರುವ ಪದ್ಮನಾಭ್, ಮುತ್ತಪ್ಪ ರೈ ಕುರಿತ ಚಿತ್ರವನ್ನು ತಾವೇ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ರೈ ಅವರು ಬದುಕಿರುವಾಗಲೇ ಅವರ ಕುರಿತು ಚಿತ್ರ ಮಾಡಬೇಕು ಎಂದು ಹೊರಟಿದ್ದೆ. ಅವರು ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿ ಜನಪ್ರಿಯರಾಗಿರುವುದರಿಂದ, ನಾಲ್ಕು ಭಾಷೆಗಳಲ್ಲಿ ಅವರ ಕುರಿತಾದ ಚಿತ್ರ ಮಾಡಬೇಕು ಎಂದು ತೀರ್ಮಾನಿಸಿದ್ದೆ. ಮುತ್ತಪ್ಪ ರೈ ಅವರ ಬಯೋಪಿಕ್ ಮಾಡುವುದಕ್ಕೆ ನಾನು ಎಂಆರ್ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನೂ ಪ್ರಾರಂಭಿಸಿದ್ದೆ. ಈ ವಿಷಯ ಅವರಿಗೂ ಗೊತ್ತಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಮಾಡುವುದಕ್ಕೆ ಆಗಿರಲಿಲ್ಲ. ಸದ್ಯದಲ್ಲೇ ಹೊಸ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 'ಡಿ ಬಾಸ್' ನೋಡಲು ಹೆದ್ದಾರಿಯಲ್ಲಿ ವೇಯ್ಟಿಂಗ್: ಫೋಟೋ ತೆಗೆಸಿಕೊಂಡು ಖುಷಿ ಪಟ್ಟ ಪೊಲೀಸರು
ಪದ್ಮನಾಭ್ ಈಗಾಗಲೇ 'ಎಂಆರ್' ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮತ್ತು ನಿರ್ಮಾಪಕ ಶೋಭಾ ರಾಜಣ್ಣ ಅವರಿಗೆ ಚಿತ್ರ ನಿಲ್ಲಿಸುವಂತೆ ಮನವಿ ಮಾಡಿದ್ದಾರಂತೆ. "ಸದ್ಯಕ್ಕೆ ಬರೀ ಮುಹೂರ್ತವಾಗಿದೆ. ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ. ಚಿತ್ರೀಕರಣ ಪ್ರಾರಂಭವಾಗಿದ್ದರೆ ಬಹಳ ಕಷ್ಟವಾಗಿರುತ್ತಿತ್ತು. ನಾನು ಒಬ್ಬ ನಿರ್ಮಾಪಕನಾಗಿರುವುದರಿಂದ ನಿರ್ಮಾಪಕರ ಕಷ್ಟ ನನಗೆ ಚೆನ್ನಾಗಿ ಗೊತ್ತಿದೆ. ಈ ನಿಟ್ಟಿನಲ್ಲಿ ಅವರಿಗೆ ಚಿತ್ರ ನಿಲ್ಲಿಸುವುದಕ್ಕೆ ಹೇಳಿದ್ದೇನೆ. ಅವರಿಂದ ಸಮ್ಮತಿ ಸಿಕ್ಕಿದ್ದು, ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಆ ನಂತರ ರೈ ಅವರ ಚಿತ್ರವನ್ನು ಎಂಆರ್ ಪಿಕ್ಚರ್ಸ್ ಬ್ಯಾನರ್ ಮೂಲಕ ನಾನೇ ನಿರ್ಮಿಸುತ್ತೇನೆ"ಎಂದು ಪದ್ಮನಾಭ್ ಹೇಳಿದ್ದಾರೆ.