ಆಗ್ಗಾಗ್ಗೆ ಮನೆಯಲ್ಲಿ ಹಿರಿಯರು ಒಂದು ಮಾತು ಹೇಳುತ್ತಿರುತ್ತಾರೆ. ನಮ್ಮ ಕಾಲವೇ ಎಷ್ಟೋ ಚೆನ್ನಾಗಿತ್ತು ಎಂಬ ಮಾತು ಬಹುತೇಕ ಎಲ್ಲರ ಮನೆಯಲ್ಲೂ ಕೇಳಿರುತ್ತೇವೆ. ನಮ್ಮ ಕಾಲದಲ್ಲಿ 25 ಪೈಸೆಗೆ ಸೋಪು, 1 ಆಣೆಗೆ ಬೆಂಕಿಪೊಟ್ಟಣ, 5 ಪೈಸೆಗೆ ತಿಂಡಿ ಕೂಡಾ ಸಿಗುತ್ತಿದ್ದು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆದರೆ ಆ ಹಣಕ್ಕೂ ಅವರಿಗೆ ಅಷ್ಟೇ ಕಷ್ಟ ಇತ್ತು ಎನ್ನುವುದು ಸತ್ಯ ಸಂಗತಿ.
ಇನ್ನು ವರನಟ ಡಾ. ರಾಜ್ಕುಮಾರ್ ಅವರು ಚಿತ್ರರಂಗಕ್ಕೆ ಬಂದಾಗ ಅಭಿಮಾನಿಗಳು 25,50 ಪೈಸೆ ನೀಡಿ ಟೆಂಟ್ನಲ್ಲಿ ಸಿನಿಮಾ ನೋಡುತ್ತಿದ್ದರಂತೆ. ಆದರೆ ಆ ಕಾಲ ಈಗ ಬದಲಾಗಿದೆ. ಟೆಂಟ್ ಜಾಗದಲ್ಲಿ ಈಗ ಥಿಯೇಟರ್, ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಅಂತೆಲ್ಲಾ ಬಂದಿವೆ. ಥಿಯೇಟರ್ ದರ ಸಿಂಗಲ್ ಸ್ಕ್ರೀನ್ನಲ್ಲಿ 100ಕ್ಕಿಂತ ಅಧಿಕವಾಗಿದೆ. ಇನ್ನು ಮಾಲ್ಗಳಲ್ಲಿ ಕೇಳಬೇಕೆ..? ಅವರು ನಿರ್ಧರಿಸಿದ್ದೇ ಟಿಕೆಟ್ ಬೆಲೆ. 1950 ರಿಂದ 1980 ವರೆಗೆ ಭಾರತೀಯ ಚಿತ್ರಮಂದಿರಗಳ ಟಿಕೆಟ್ ಬೆಲೆ ಒಬ್ಬರಿಗೆ ಕೇವಲ 2-3 ರೂಪಾಯಿ ಇತ್ತು.
ಈಗಿನ ಪರಿಸ್ಥಿತಿಯಲ್ಲಿ100 ರೂಪಾಯಿ ಟಿಕೆಟ್ ಬೆಲೆಗೆ ನಿರ್ಮಾಪಕನಿಗೆ ದೊರೆಯುವುದು 30 ರೂಪಾಯಿ. ಉಳಿದ ಹಣದಲ್ಲಿ ಚಿತ್ರಮಂದಿರದ ಬಾಡಿಗೆ, ವಿತರಕರ ಕಮಿಷನ್, ಜಿಎಸ್ಟಿ ಕೂಡಾ ಕಡಿತಗೊಳ್ಳುತ್ತದೆ. ಒಟಿಟಿಯಲ್ಲಿ ಇದರ ಜೊತೆಗೆ 25-100 ರೂಪಾಯಿ ನೀಡಿ ಮನೆಯಲ್ಲೇ ಮನರಂಜನೆ ಪಡೆಯುವ ವ್ಯವಸ್ಥೆ ಕೂಡಾ ಬಂದಿದೆ. 80 ರ ದಶಕದ ಸಿನಿಮಾ ಟಿಕೆಟ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಮೂಲಕ ಅಂದಿನ ದಿನವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.