ರಾಘವೇಂದ್ರ ರಾಜ್ಕುಮಾರ್ ಅಭಿನಯದ 'ರಾಜತಂತ್ರ' ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇಂದು ಮಧ್ಯಾಹ್ನ ನಡೆಯುತ್ತಿರುವ ಸಮಾರಂಭದಲ್ಲಿ ಪುನೀತ್ ರಾಜ್ಕುಮಾರ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಚಿತ್ರವನ್ನು 2021ರ ಜನವರಿ 1ರ ಹೊಸ ವರ್ಷದಂದು ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ಯೋಜನೆಯಾಗಿದ್ದು ಇದಕ್ಕಾಗಿ ಸಕಲ ತಯಾರಿ ನಡೆಯುತ್ತಿವೆ.
ರಾಜತಂತ್ರ ಸಿನಿಮಾವೇನೋ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರತಂಡದವರು ತ್ವರಿತಗತಿಯಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಅಕ್ಟೋಬರ್ 4 ಭಾನುವಾರದಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಅಲ್ಲಿಂದ ಈ ಎರಡೂವರೆ ತಿಂಗಳ ಅಂತರದಲ್ಲಿ ಚಿತ್ರೀಕರಣ ಮುಗಿದಿರುವುದಷ್ಟೇ ಅಲ್ಲ, ಸೆನ್ಸಾರ್ ಸಹ ಮುಗಿದು ಚಿತ್ರ ಬಿಡುಗಡೆಯನ್ನೂ ಘೋಷಿಸಲಾಗಿದೆ. ಅಲ್ಲಿಗೆ ಅದೆಷ್ಟು ಸ್ಪೀಡ್ ಆಗಿದ್ದಾರೆ ಚಿತ್ರರಂಗದ ಜನ ಎಂಬುದನ್ನು ಒಮ್ಮೆ ಯೋಚನೆ ಮಾಡಿ. ಬರೀ 'ರಾಜತಂತ್ರ' ಅಷ್ಟೇ ಅಲ್ಲ, ರವಿಚಂದ್ರನ್ ಅಭಿನಯದ 'ಕನ್ನಡಿಗ' ಚಿತ್ರವನ್ನು ಕೂಡಾ ಅದೇ ವೇಗದಲ್ಲಿ ಮುಗಿಸಲಾಗಿದೆ. 'ರಾಜತಂತ್ರ' ಚಿತ್ರವನ್ನಾದರೂ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, 'ಕನ್ನಡಿಗ' ಆರಂಭವಾಗಿದ್ದು ಇನ್ನೂ ತಡವಾಗಿ. ಆದರೂ ಚಿತ್ರತಂಡದವರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: 'ಶಕೀಲಾ ಚಿತ್ರಗಳು ಚೀನಾ, ಜಪಾನ್, ಸಿನಾಲಿಸ್ ಭಾಷೆಗೆ ಡಬ್ ಆಗುತ್ತಿದ್ವು'
ಎಲ್ಲಾ ಸರಿ ಇಷ್ಟೊಂದು ವೇಗವಾಗಿ ಸಿನಿಮಾ ಮುಗಿಸುತ್ತಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಬರಬಹುದು. ಚಿತ್ರ ಯಾವಾಗಲೇ ಬಿಡುಗಡೆಯಾಗಲಿ, ಡಿಸೆಂಬರ್ 31ರೊಳಗೆ ಸೆನ್ಸಾರ್ ಮಾಡಿಸಿದರೆ, ಅದು ಈ ವರ್ಷದ ಚಿತ್ರವೆಂದು ಪರಿಗಣಿಸಲಾಗುತ್ತದೆ. ಬೇಗ ಸೆನ್ಸಾರ್ ಆಗಿಬಿಟ್ಟರೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗೆ ಕಳಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಕೊರೊನಾದಿಂದ ಈ ಬಾರಿ ಕಡಿಮೆ ಚಿತ್ರಗಳಿರುವುದರಿಂದ, ಪ್ರಶಸ್ತಿ ವಿಷಯದಲ್ಲಿ ಹೆಚ್ಚು ಪೈಪೋಟಿ ಇರುವುದಿಲ್ಲ. ಒಂದು ಪಕ್ಷ ಬಾಕ್ಸ್ ಆಫೀಸ್‍ನಲ್ಲಿ ಚಿತ್ರ ಗೆಲ್ಲದಿದ್ದರೂ ಪ್ರಶಸ್ತಿ ಸಿಕ್ಕಿತು ಎಂಬ ಖುಷಿ ಚಿತ್ರತಂಡದವರಿಗೆ ಇದ್ದೇ ಇರುತ್ತದೆ. ಹಾಗಾಗಿ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಮುಂದಿನ 12 ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಸೆನ್ಸಾರ್ ಆದ ಸುದ್ದಿ ಬಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ.