2000 ಜುಲೈ 30 ರಂದು ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್ಕುಮಾರ್ ಅವರನ್ನು ಅಪಹರಿಸಿದ ಸಮಯದಲ್ಲಿ ಕನ್ನಡ ಚಿತ್ರೋದ್ಯಮ 108 ದಿನಗಳ ಕಾಲ ಬಂದ್ ಆಗಿತ್ತು. ವೀರಪ್ಪನ್ ಕಳಿಸಿದ ವಿಡಿಯೋ ಟೇಪ್ನಲ್ಲಿ ಚಿತ್ರೋದ್ಯಮ ಎಂದಿನಂತೆ ಮುಂದುವರೆಯಲಿ ಎಂದು ಅಣ್ಣಾವ್ರು ಹೇಳಿದ್ದರು. ಆದರೆ ಅವರು ಸುರಕ್ಷಿತವಾಗಿ ಮರಳಿದ ನಂತರವೇ ಎಲ್ಲಾ ಚಟುವಟಿಕೆಗಳನ್ನು ಆರಂಭಿಸುವುದಾಗಿ ಚಿತ್ರರಂಗದವರು ನಿರ್ಧರಿಸಿದ್ದರು.
ನವೆಂಬರ್ 15 ರಂದು ಡಾ. ರಾಜ್ಕುಮಾರ್ ಸುರಕ್ಷಿತವಾಗಿ ವಾಪಸ್ ಬಂದ ನಂತರ ಇಡೀ ಚಿತ್ರರಂಗ ಹಬ್ಬದಂತೆ ಆಚರಿಸಿ ಮತ್ತೆ ಚಿತ್ರ ಚಟುವಟಿಕೆಗಳನ್ನು ಆರಂಭಿಸಿತ್ತು. ಅದನ್ನು ಹೊರತುಪಡಿಸಿ ಮಧ್ಯದಲ್ಲಿ ಕಾವೇರಿ ಹೋರಾಟ, ಮಹದಾಯಿ ಹೋರಾಟ ಎಂದು ಚಿತ್ರೋದ್ಯಮ 2-3 ದಿನಗಳ ಕಾಲ ಬಂದ್ ಆಗಿದ್ದು ಬಿಟ್ಟರೆ ಇದೀಗ ಕೋವಿಡ್-19 ಕಾರಣದಿಂದ ಚಿತ್ರೋದ್ಯಮ ಮತ್ತೆ ಬಂದ್ ಆಗಿದೆ. ಕಳೆದ ಒಂದು ವಾರದಿಂದ ಎಲ್ಲಾ ಚಿತ್ರ ಚಟುವಟಿಕೆಗಳು ಬಂದ್ ಆಗಿವೆ. ಥಿಯೇಟರ್ಗಳು ಬಂದ್ ಆಗಿವೆ. ಯಾವುದೇ ಚಿತ್ರಪ್ರದರ್ಶನ ಇಲ್ಲ. ಈ ಕಾರಣದಿಂದ ಸುಮಾರು 3000 ಸಿನಿಮಾ ಕಾರ್ಮಿಕರ ಬದುಕು ಅಂತಂತ್ರವಾಗಿದೆ. ಈ ಕೊರೊನಾ ಮಹಾಮಾರಿ ಯಾವಾಗ ನಿಲ್ಲುವುದೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಮಾರ್ಚ್ 14 ರಿಂದ ಮಾರ್ಚ್ 31 ವರೆಗೂ ಘೋಷಿಸಿರುವ 'ಕೊರೊನಾ ಬಂದ್' ಗೆ ಚಿತ್ರರಂಗದ ನಿರ್ಮಾಪಕ, ಪ್ರದರ್ಶಕ, ವಿತರಕ, ಕಲಾವಿದರು, ತಂತ್ರಜ್ಞರು ಕೈ ಜೋಡಿಸಿದ್ದಾರೆ.
ಆದರೆ ಈ 18 ದಿನಗಳಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸಿರುವುದು ಕಾರ್ಮಿಕರ ಸಂಘ. ಅವರೆಲ್ಲರೂ ದಿನಗೂಲಿ ನೌಕರರ ಹಾಗೆ. ಅಂದು ದುಡಿದದ್ದು ಅಂದಿಗೆ ಖರ್ಚು ಮಾಡುವ ಮಂದಿ ಅವರು. ಈಗ ಕೆಲಸವಿಲ್ಲದೆ, ಸಂಬಳ ಇಲ್ಲದೆ ಇವರೆಲ್ಲಾ ಕಷ್ಟ ಪಡುತ್ತಿದ್ದಾರೆ. ಡಾ. ರಾಜ್ ಅಪಹರಣವಾಗಿದ್ದ ವೇಳೆ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಸಂಘದಿಂದ ಸಾವಿರಾರು ಕಾರ್ಮಿಕರಿಗೆ ಅಕ್ಕಿ, ಬೇಳೆ ಹಾಗೂ ಇನ್ನಿತರ ದಿನನಿತ್ಯದ ಅತ್ಯವಶ್ಯಕ ವಸ್ತುಗಳನ್ನು ಉಚಿತವಾಗಿ ನೀಡಲಾಗಿತ್ತು. ಕಾರ್ಮಿಕರ ಕಷ್ಟಕ್ಕೆ ಹಲವಾರು ನಿರ್ಮಾಪಕರು, ದಾನಿಗಳು ಮುಂದಾಗಿದ್ದರು. ಈಗಲೂ ಕೂಡಾ ಅದೇ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಆಜ್ಞೆ ಪಾಲಿಸಬೇಕು ಎಂದು ಫಿಲ್ಮ್ ಚೇಂಬರ್ ಹೇಳುತ್ತಿದೆಯೇ ಹೊರತು ಕಾರ್ಮಿಕರ ಕಷ್ಟದ ಬಗ್ಗೆ ಯಾರೂ ಮಾತನಾಡುತ್ತಿಲ್ಲ.