ಕಾಲಿವುಡ್ನ ಹಿರಿಯ ನಟ ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮರಕ್ಕರ್: ಅರಬಿಕಡಲಿಂಟೆ ಸಿಂಹಂ'. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಈ ಚಿತ್ರ ಬಿಡುಗಡೆಯಾಗಬೇಕಿತ್ತು.
ಮೂರು ವಾರಗಳ ಕಾಲ ಯಾವುದೇ ಸ್ಪರ್ಧಿ ಇಲ್ಲ:
ಕೇರಳದ ಚಿತ್ರಪ್ರದರ್ಶಕರು ಮತ್ತು ಚಿತ್ರ ನಿರ್ಮಾಪಕರ ಸಂಘದ ಮಧ್ಯೆ ಒಂದು ಒಪ್ಪಂದವಾಗಿದ್ದು, ಅದರ ಪ್ರಕಾರ ಮರಕ್ಕರ್: ಅರಬಿಕಡಲಿಂಟೆ ಸಿಂಹಂ ಚಿತ್ರ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ. ಕೇರಳದ 600 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಮೂರು ವಾರಗಳ ಕಾಲ ಬೇರೆ ಯಾವುದೇ ಚಿತ್ರ ಬಿಡುಗಡೆಯಾಗುವಂತಿಲ್ಲ.
ಆ.12ರಿಂದ ಮೂರು ವಾರಗಳ ಕಾಲ ಇಡೀ ಕೇರಳದಲ್ಲಿ ಮೋಹನ್ ಲಾಲ್ ಅವರ ಈ ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾ ಸಹ ಬಿಡುಗಡೆಯಾಗುವಂತಿಲ್ಲ ಮತ್ತು ಪ್ರದರ್ಶನವಾಗುವಂತಿಲ್ಲ. ಇದಕ್ಕೆ ಕಾರಣವೆಂದರೆ ಮರಕ್ಕರ್: ಅರಬಿಕಡಲಿಂಟೆ ಸಿಂಹಂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ. ಚಿತ್ರಕ್ಕೆ ಹಾಕಿದ ಹಣ ಬರಬೇಕೆಂದರೆ ಚಿತ್ರಮಂದಿರಗಳಲ್ಲೇ ಪ್ರದರ್ಶನವಾಗಬೇಕು. ಕಡಿಮೆ ಚಿತ್ರಮಂದಿರಗಳಲ್ಲಿ ಮತ್ತು ಇನ್ನಿತರ ಚಿತ್ರಗಳ ಸ್ಪರ್ಧೆ ಮಧ್ಯದಲ್ಲಿ ಅಷ್ಟೊಂದು ಹಣ ವಾಪಸ್ ಪಡೆಯುವುದು ಬಹಳ ಕಷ್ಟ. ಮೇಲಾಗಿ, ಚಿತ್ರ ಕಳೆದ ಒಂದೂವರೆ ವರ್ಷಗಳಿಂದ ಬಿಡುಗಡೆಗೆ ಕಾಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಚಿತ್ರಕ್ಕೊಂದು ರಿಯಾಯಿತಿ ಕೊಡುವುದಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ.
ಮರಕ್ಕರ್: ಅರಬಿಕಡಲಿಂಟೆ ಸಿಂಹಂ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದು, ಮೋಹನ್ ಲಾಲ್ ಜೊತೆಗೆ ಕೀರ್ತಿ ಸುರೇಶ್, ಸುಹಾಸಿನಿ, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಪ್ರಭು ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಅತ್ಯುತ್ತಮ ಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಸಂತಸ ತಂದಿದೆ: ಮೋಹನ್ ಲಾಲ್