ಸಿನಿಮಾ ಎಂಬ ಮಾಯಾ ಲೋಕದಲ್ಲಿ ಕ್ಲಿಕ್ ಆಗ್ಬೇಕಂದ್ರೆ ಅಭಿನಯದ ಜೊತೆಗೆ ಅದೃಷ್ಟ ಕೂಡ ಜತೆಗಿರಬೇಕು. ಇಲ್ಲೊಬ್ಬರು ಬೆಳವಣಿಗೆಯ ಹಾದಿಯಲ್ಲಿರುವ ಯುವನಟ ಸ್ಯಾಂಡಲ್ವುಡ್ನಲ್ಲಿ ಶೈನ್ ಆಗಬೇಕು ಎಂಬ ಹಂಬಲದಿಂದ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ.
ಮೂಲತಃ ಮೈಸೂರಿನ ವಿಜಯನಗರದವರಾದ ಅನಿಲ್ ಸಿದ್ದು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಶಾಲಾ, ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಇವರು, ನಟನೆಯ ಕುರಿತು ಚಿಕ್ಕಂದಿನಿಂದಲೂ ಆಸಕ್ತಿ ಹೊಂದಿದ್ದರು. ಎಂಬಿಎ ಅಧ್ಯಯನದ ಸಮಯದಲ್ಲಿ ಮಾಡೆಲಿಂಗ್ ಮುಖಾಂತರ ಸಿನಿಮಾ ರಂಗ ಪ್ರವೇಶಿಸಿ, ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಕಲರ್ ಫುಲ್ ದುನಿಯಾಕ್ಕೆ ಎಂಟ್ರಿ ಕೊಟ್ಟರು.
ಅನಿಲ್ ಸಿದ್ದು ಮಾಡೆಲಿಂಗ್ನಲ್ಲಿರುವಾಗ ಸಿಗುತ್ತಿದ್ದ ಸಣ್ಣ ಪುಟ್ಟ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡವರು. ಮಣಿರತ್ನಂ ನಿರ್ದೇಶನದ ಕಾರ್ಟ್ ವಿಲಯಾಡು, ಎ.ಆರ್ ಮುರಗದಾಸ್ ನಿರ್ದೇಶನದ ಕತ್ತಿ, ಶಂಕರ್ ನಿರ್ದೇಶನದ ಐ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿ ಸಿದ್ದು ಗಮನ ಸೆಳೆದಿದ್ದಾರೆ. ಜೊತೆಗೆ ಶ್ರೀಮುರಳಿ ಸಾರಥ್ಯದ ಮುಮ್ತಾಜ್ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಖಳನಾಯಕನಾಗಿ ನಟಿಸಿದ್ದಾರೆ. ಬಳಿಕ ತಮಿಳಿನ ಮೆಟ್ರೋ ಚಿತ್ರದ ರೀಮೇಕ್ನಲ್ಲಿ ಬಾಬಿ ಸಿಂಹ ಅವರ ಪಾತ್ರದಲ್ಲಿ ಮತ್ತು ಕನ್ನಡದಲ್ಲಿ ಮುರಳಿ ಗುರಪ್ಪನವರ ನಿರ್ದೇಶನದಲ್ಲಿ ಮೂಡಿಬಂದ ಸಿಲಿಕಾನ್ ಸಿಟಿ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದಲ್ಲದೆ, ತಮಿಳಿನ ಮೀಸೆಯಿ ಮುರಕ್ಕು ಚಿತ್ರದ ರಿಮೇಕ್ ಗುರುದೇಶಪಾಂಡೆ ನಿರ್ದೇಶನದ ಕನ್ನಡ ಚಿತ್ರ ಪಡ್ಡೆಹುಲಿಯಲ್ಲೂ ಖಳನಾಯಕನಾಗಿ ಅನಿಲ್ ಸಿದ್ದು ನಟಿಸಿದ್ದಾರೆ.
ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಇವರು, ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಶಿಷ್ಯರಾದ ವಿಜಯ್ ಸೂರ್ಯ ಸಾರಥ್ಯದಲ್ಲಿ ಮೂಡಿಬಂದ ಎ+ ಸಿನಿಮಾದಲ್ಲಿ ಕಥಾ ನಾಯಕನಾಗಿ ಸಿದ್ದು ಗಾಂಧಿನಗರದಲ್ಲಿ ಹೆಸರು ಪಡೆದುಕೊಂಡರು. ಈ ಮೂಲಕ ಇವರ ಮೊದಲ ಸಿನಿಮಾದ ಕಟೌಟ್ ಮೆಜೆಸ್ಟಿಕ್ನ ಸಂತೋಷ್ ಚಿತ್ರಮಂದಿರದಲ್ಲಿ ರಾರಾಜಿಸಿತ್ತು. ಇದೀಗ ಸಿದ್ದು ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಸಿನಿಮಾ 'ವಿರಾಟಪರ್ವ' ತೆರೆಗೆ ಬರಲು ಸಿದ್ಧವಾಗಿದೆ.
ಇದರೊಂದಿಗೆ ಉದಯ ಪ್ರಕಾಶ್ ನಿರ್ದೇಶನದ ಸ್ಯಾಂಡಲ್ ವುಡ್ನ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಬಿಡುಗಡೆಗೆ ಸಿದ್ಧವಾಗಿರುವ 'ವರದ' ಚಿತ್ರದಲ್ಲಿ ಸಿದ್ದು ಎಂಎಲ್ಎ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೈಸೂರು, ಮಂಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ.
ನ್ಯಾಷನಲ್ ಅವಾರ್ಡ್ ವಿನ್ನರ್ ಸಾಹಸ ನಿರ್ದೇಶಕ ಮಾಸ್ಟರ್ ವಿಕ್ರಮ್ ನಿರ್ದೇಶನದಲ್ಲಿ ಫೈಟಿಂಗ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು, ಈಗಾಗಲೇ ಸಿನಿಮಾದ ಡಬ್ಬಿಂಗ್ ಪೋಸ್ಟ್ ಪ್ರೊಡಕ್ಷನ್ನ ಎಲ್ಲಾ ಕೆಲಸ ಮುಗಿದಿದೆ. ಕೊರೊನಾ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ.