'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರ ಬಿಡುಗಡೆ ವೇಳೆ ಚಿತ್ರದ ನಾಯಕ ಚಂದನ್ ಆಚಾರ್ ಸಿನಿಮಾ ಪ್ರಮೋಷನ್ಗೆ ಬರದೆ ನಮ್ಮ ಚಿತ್ರತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಚಿತ್ರದ ನಿರ್ಮಾಪಕ ಮಂಜುನಾಥ್ ಹಾಗೂ ನಿರ್ದೇಶಕ ಕುಮಾರ್ ಚಂದನ್ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ತಬಲಾ ನಾಣಿ ಕೂಡಾ ಚಂದನ್ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಚಂದನ್ ಮಾತ್ರ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಇದೀಗ ಚಿತ್ರ ಯಶಸ್ವಿಯಾಗಿ 63 ದಿನಗಳನ್ನು ಪೂರೈಸಿದ್ದು ನಿನ್ನೆ ಕಲಾವಿದರ ಸಂಘದಲ್ಲಿ ನಡೆದ ಸಂತೋಷ ಕೂಟದಲ್ಲಿ ಚಿತ್ರತಂಡದ ಎಲ್ಲಾ ಸದಸ್ಯರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಆಯೋಜಿಸಿ ತೆರೆ ಮೇಲೆ ಹಾಗೂ ತೆರೆಮರೆಯಲ್ಲಿ ಕಾಣಿಸಿದವರಿಗೆ ಚಿತ್ರತಂಡ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿತು. ಕಾರ್ಯಕ್ರಮಕ್ಕೆ ನಟ ಚಂದನ್ ಆಚಾರ್ ಕೂಡಾ ಹಿಂದಿನ ವೈಮನಸ್ಸು ಮರೆತು ಬಂದಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಚಂದನ್, ಚಿತ್ರತಂಡದ ಜೊತೆಗಿನ ಕಿರಿಕ್ ಬಗ್ಗೆ ಸ್ಪಷ್ಟನೆ ನೀಡಿದರು.
ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈ ಮೀರಿಹೋಗಿರುತ್ತದೆ. ನಮ್ಮ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿರುವುದು ನನಗೆ ಬಹಳ ಖುಷಿ ತಂದಿದೆ. ನಾನು 'ಮಂಗಳವಾರ ರಜಾದಿನ' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು ಪ್ರಮೋಷನ್ ವೇಳೆ ಶೂಟಿಂಗ್ನಲ್ಲಿದ್ದೆ. ಜೊತೆಗೆ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಒಂದು ಪಾತ್ರ ಕೂಡಾ ಮಾಡಿದ್ದೆ. ಸ್ವಲ್ಪ ಬ್ಯುಸಿ ಇದ್ದ ಕಾರಣ ಪ್ರಮೋಷನ್ನಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಆದ ಕಾರಣ ಬರಲಾಗಲಿಲ್ಲ. ಕೆಲವೊಮ್ಮೆ ಹೀಗೆ ತಪ್ಪಾಗಿಬಿಡುತ್ತದೆ. ಇದಕ್ಕೆ ಕ್ಷಮೆ ಇರಲಿ ಎಂದು ಕರಿಯಪ್ಪ ಟೀಮ್ ಜೊತೆಗಿನ ವಿವಾದಕ್ಕೆ ಇತಿಶ್ರೀ ಹಾಡಿದರು.