ಬೆಂಗಳೂರು: ಚಿತ್ರರಂಗದ ಕಲಾವಿದರ ಕಷ್ಟಗಳಿಗೆ ಸ್ಪಂದಿಸಲು ನಾವಿದ್ದೇವೆ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. ಕ್ಷೇತ್ರದ ಮಾರತ್ ಹಳ್ಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನಿಮಾ ಮತ್ತು ರಂಗಭೂಮಿ ಸಹ ಕಲಾವಿದರಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು .
ಕೋವಿಡ್ ನಂತಹ ಕ್ಲಿಷ್ಟ ಸಂದರ್ಭದಲ್ಲಿ ಬಡ, ಮಧ್ಯಮ ವರ್ಗದ ಜನ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಅಲ್ಲದೇ ಹಿರಿ, ಕಿರುತೆರೆಯ ಸಹ ಕಲಾವಿದರು ಕೂಡಾ ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದನ್ನು ಅರಿತು ಸುಮಾರು 250ಕ್ಕೂ ಹೆಚ್ಚು ಕಲಾವಿದರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಮಹದೇವಪುರ ಕ್ಷೇತ್ರದಲ್ಲಿ ಟ್ಯಾಕ್ಸಿ, ಆಟೋ, ಪೌರಕಾರ್ಮಿಕರು, ದಾದಿಯರು, ಆಶಾ ಕಾರ್ಯಕರ್ತರಿಗೆ ಹದಿನೈದು ಸಾವಿರಕ್ಕೂ ಹೆಚ್ಚು ದಿನಸಿ ಕಿಟ್ಗಳನ್ನು ವಿತರಿಸಲಾಗಿದೆ. ಸಂಕಷ್ಟದಲ್ಲಿರುವ ಮತ್ತಷ್ಟು ಜನರಿಗೆ ದಿನಸಿ ಕಿಟ್ಗಳನ್ನು ತಯಾರು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಂಚಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ಮನೋಹರ್ ರೆಡ್ಡಿ, ನಟರಾಜ್, ಮುಖಂಡರಾದ ಜಯ ಚಂದ್ರರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಮಹೇಂದ್ರ ಮೋದಿ, ಅಶೋಕ್ ರೆಡ್ಡಿ, ಪವನ್ ಕುಮಾರ್, ಕಲಾವಿದರಾದ ಡಿಂಗ್ರಿನಾಗರಾಜ್ ಒಂಮಹೇಶ್, ಬಿರಾದಾರ್, ಎಂಎಸ್ ನರೇಶ ಮತ್ತಿತರರು ಹಾಜರಿದ್ದರು.