1980-1990 ರ ಅವಧಿಯಲ್ಲಿ ಬೆಳ್ಳಿತೆರೆ ಮೇಲೆ ಸಾಕಷ್ಟು ನಟ-ನಟಿಯರು ಮಿಂಚಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಟಾಲಿವುಡ್ ಚಿರಂಜೀವಿ, ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್, ಮಲಯಾಳಂ ಟಾಪ್ ಹೀರೋ ಮೋಹನ್ ಲಾಲ್ ಇವರೆಲ್ಲಾ ಈ ಜನರೇಷನ್ಗೆ ಸೇರಿದವರು.
ಈ ಹೀರೋಗಳ ಜೊತೆಗೆ ಸುಮಲತಾ, ರಾಧಿಕಾ, ರಮ್ಯಕೃಷ್ಣ, ಖುಷ್ಬೂ, ಸುಹಾಸಿನಿ ಹಾಗೂ ಇನ್ನಿತರ ನಟಿಯರು ಕೂಡಾ ಆ ಕಾಲದಲ್ಲಿ ಭಾರೀ ಫೇಮಸ್ ಆಗಿದ್ದರು. ಈ ನಟ-ನಟಿಯರೆಲ್ಲಾ ಒಟ್ಟಿಗೆ ಸೇರಿ ಪ್ರತಿ ವರ್ಷ ಪಾರ್ಟಿ ಮಾಡುವುದನ್ನು ಆಗಿನಿಂದ ರೂಢಿಸಿಕೊಂಡು ಬಂದಿದ್ದಾರೆ. ಯಾವುದೋ ಒಂದು ಥೀಮ್ ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡು ಒಟ್ಟಿಗೆ ಸೇರಿ, ಭೋಜನ ಮಾಡುತ್ತಾ, ತಮ್ಮ ಕೆರಿಯರ್ ಹಾಗೂ ಇನ್ನಿತರ ವಿಷಯಗಳನ್ನು ಚರ್ಚಿಸುತ್ತಾ ಆನಂದವಾಗಿ ಕಾಲ ಕಳೆಯುತ್ತಾರೆ.
![south stars](https://etvbharatimages.akamaized.net/etvbharat/prod-images/4878167_kushb.jpg)
ಈ ಬಾರಿ ಈ ಪಾರ್ಟಿಯನ್ನು ಮೆಗಾಸ್ಟಾರ್ ಚಿರಂಜೀವಿ ತಮ್ಮ ಮನೆಯಲ್ಲಿ ಏರ್ಪಡಿಸಲಿದ್ದಾರಂತೆ. ಅದಕ್ಕೆ ಎರಡು ಕಾರಣ ಇದೆ. ಮೊದಲನೆಯದ್ದು ಚಿರಂಜೀವಿ ಅಭಿನಯದ 'ಸೈರಾ ನರಸಿಂಹರೆಡ್ಡಿ' ಚಿತ್ರ ಸಕ್ಸಸ್ ಆಗಿದ್ದು ಈ ಸಂತೋಷವನ್ನು ತಮ್ಮ ಜನರೇಶನ್ ನಟ-ನಟಿಯರೊಂದಿಗೆ ಹಂಚಿಕೊಳ್ಳುವುದು ಚಿರು ಆಸೆಯಂತೆ. ಜೊತೆಗೆ ಇತ್ತೀಚೆಗೆ ಅವರು ತಮ್ಮ ಮನೆಯನ್ನು ನವೀಕರಣ ಮಾಡಿದ್ದು ಅದನ್ನು ತಮ್ಮ ಸಹನಟರಿಗೆ ತೋರಿಸುವ ಉದ್ದೇಶದಿಂದ ಈ ಬಾರಿಯ ಪಾರ್ಟಿಯನ್ನು ತಮ್ಮ ಮನೆಯಲ್ಲಿ ಏರ್ಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ರೆಬಲ್ ಸ್ಟಾರ್ ಅಂಬರೀಶ್ ಇದ್ದಾಗ ಅವರು ಈ ಪಾರ್ಟಿಗೆ ಸುಮಲತಾ ಜೊತೆ ತಪ್ಪದೆ ಹಾಜರಾಗುತ್ತಿದ್ದರು. ಆದರೆ ಈ ಬಾರಿ ಸುಮಲತಾ ಈ ಪಾರ್ಟಿಗೆ ಹೋಗಲಿದ್ದಾರಾ ಇಲ್ಲವಾ ಕಾದುನೋಡಬೇಕು.