ಅಕ್ಟೋಬರ್ 2 ರಂದು ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹರೆಡ್ಡಿ' ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ಜೀವನಚರಿತ್ರೆ ಆಧಾರಿತ ಈ ಸಿನಿಮಾಗೆ ಪ್ರಶಸ್ತಿ ದೊರೆಯುವುದು ಗ್ಯಾರಂಟಿ ಎನ್ನುವುದು ಸಿನಿಮಾ ನೋಡಿದವರ ಮಾತು.
ಇನ್ನು ಸೈರಾ ಯಶಸ್ಸಿನ ಖುಷಿಯಲ್ಲಿರುವಾಗಲೇ ಮೆಗಾಸ್ಟಾರ್ ಚಿರಂಜೀವಿ ತಮ್ಮ 152 ನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಕೊರಟಾಲ ಶಿವ ಚಿತ್ರಕ್ಕೆ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಕೂಡಾ ಕೊನಿಡೇಲ ಪ್ರೊಡಕ್ಷನ್ ಬ್ಯಾನರ್ ಅಡಿ ರಾಮ್ಚರಣ್ ತೇಜ ನಿರ್ಮಿಸುತ್ತಿದ್ದಾರೆ. ಮಂಗಳವಾರ ಹೈದರಾಬಾದ್ನಲ್ಲಿ ಚಿತ್ರದ ಪೂಜೆ ನೆರವೇರಿದೆ. ಮುಹೂರ್ತ ಸನ್ನಿವೇಶಕ್ಕೆ ಚಿರಂಜೀವಿ ಪತ್ನಿ ಸುರೇಖ ಕೊನಿಡೇಲ ಕ್ಲ್ಯಾಪ್ ಮಾಡಿದರು. ಇನ್ನು ಈ ಸಿನಿಮಾ ಕೂಡಾ ಒಂದು ಸಾಮಾಜಿಕ ಸಂದೇಶವನ್ನು ಒಳಗೊಂಡ ಸಿನಿಮಾ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಹಿಂದೆ ಚಿರಂಜೀವಿಯನ್ನು ನೋಡಿರಂತ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಾಮ್ಚರಣ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ತಿಳಿದುಬಂದಿಲ್ಲ. ಕೊನಿಡೇಲ ಪ್ರೊಡಕ್ಷನ್ ಜೊತೆ ಮ್ಯಾಟ್ನಿ ಎಂಟರ್ಟೈನ್ಮೆಂಟ್ ಸಂಸ್ಥೆ ಕೂಡಾ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 'ಚಿರು 152' ಹೆಸರಿನಲ್ಲಿ ಕೆಲವೇ ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿದ್ದು ಮುಂದಿನ ವರ್ಷ ದಸರಾ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.