ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮತ್ತೆ ಉದ್ಭವ' ಚಿತ್ರ ಟ್ರೇಲರ್ ಹಾಗೂ ಹಾಡುಗಳಿಂದಲೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಫೆಬ್ರವರಿ 7 ರಂದು ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಇನ್ನು ಈ ಚಿತ್ರ ಸೆಟ್ಟೇರಿದಾಗಿನಿಂದಲೇ ಗಾಂಧಿನಗರದಲ್ಲಿ ಸದ್ದು ಮಾಡಿತ್ತು. ಸುಮಾರು 30 ವರ್ಷಗಳ ಹಿಂದೆ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದ 'ಉದ್ಭವ' ಚಿತ್ರ ಚಂದನವನದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ 30 ವರ್ಷಗಳ ನಂತರ ಮತ್ತೆ ಅದೇ ನಿರ್ದೇಶಕ 'ಉದ್ಭವ' ಸಿಕ್ವೇಲ್ ಆದ 'ಮತ್ತೆ ಉದ್ಭವ' ಅನೌಸ್ಸ್ ಮಾಡಿದ್ದು ಗಾಂಧಿನಗರ ಸಿನಿಪಂಡಿತರಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವುದು ಸಹಜ. ಅದರಂತೆ ನಿರ್ದೇಶಕರು ಚಿತ್ರದ ಟ್ರೇಲರ್ನಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಇಟ್ಟು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ. ಅಲ್ಲದೆ 'ಮತ್ತೆ ಉದ್ಭವ' ಚಿತ್ರದ ಮತ್ತೊಂದು ವಿಶೇಷ ಅಂದರೆ 'ಉದ್ಭವ' ಕ್ಲಾಸ್ ಚಿತ್ರವಾಗಿತ್ತು. ಆದರೆ 'ಮತ್ತೆ ಉದ್ಭವ' ಚಿತ್ರ ಪಕ್ಕಾ ಮಾಸ್ ಚಿತ್ರವಾಗಿದೆ.
ಇದೇ ಮೊದಲ ಬಾರಿಗೆ ನಾನು ಮಾಸ್ ಚಿತ್ರ ಮಾಡಿರುವುದಾಗಿ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ರಂಗಾಯಣ ರಘು 'ಉದ್ಭವ' ಚಿತ್ರದ ಅನಂತ್ ನಾಗ್ ಪಾತ್ರದ ಮಗನ ಪಾತ್ರವನ್ನು ನಿಭಾಯಿಸಿದ್ದಾರೆ. ರಂಗಾಯಣ ರಘು ಮಗನ ಪಾತ್ರದಲ್ಲಿ 'ಪ್ರೀಮಿಯರ್ ಪದ್ಮಿನಿ' ಖ್ಯಾತಿಯ ಪ್ರಮೋದ್ ನಟಿಸಿದ್ದಾರೆ. ನಾಯಕಿಯಾಗಿ ಮಿಲನ ನಾಗರಾಜ್ ನಟಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಮಿಲನ ನಾಗರಾಜ್ ರಾಜಕಾರಣಿ ಪಾತ್ರದಲ್ಲಿ ಮಿಂಚಿದ್ದಾರೆ.
'ಮತ್ತೆ ಉದ್ಭವ' ಚಿತ್ರವನ್ನು 'ಕಾಫಿಕಟ್ಟೆ' ಚಿತ್ರವನ್ನು ನಿರ್ಮಿಸಿದ್ದ ನಿತ್ಯಾನಂದ್ ಭಟ್ ತಮ್ಮ ಸ್ನೇಹಿತರ ಜೊತೆ ಸೇರಿ ನಿರ್ಮಿಸಿದ್ದಾರೆ. ಧೀರಜ್ ಫಿಲ್ಮ್ ಸಂಸ್ಥೆ ಈ ಚಿತ್ರವನ್ನು ರಾಜ್ಯಾದ್ಯಂತ 150 ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡುತ್ತಿದೆ. ವಿದೇಶಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ 30 ವರ್ಷಗಳ ಹಿಂದೆ ಬಂದಿದ್ದ 'ಉದ್ಭವ' ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಈಗ 'ಮತ್ತೆ ಉದ್ಭವ' ಮತ್ತೆ ಹೊಸ ಟ್ರೆಂಡ್ ಸೃಷ್ಟಿಸಲಿದೆಯಾ ಎಂಬುದನ್ನು ಕಾದು ನೋಡಬೇಕು.