ವಿನೋದ್ ಪ್ರಭಾಕರ್ ಅಭಿನಯದ ಬಹಳಷ್ಟು ಸಿನಿಮಾಗಳು ಸೆಟ್ಟೇರುತ್ತಿವೆ. ಆದರೆ ಆ ಸಿನಿಮಾಗಳು ಬಿಡುಗಡೆಯಾಗುವುದು ತಡವಾಗುತ್ತಿವೆ. 'ಫೈಟರ್' ಸಿನಿಮಾ ಆರಂಭವಾಗಿ 2 ವರ್ಷಗಳು ಕಳೆದಿವೆ. ಆದರೆ ಇದುವರೆಗೂ ಬಿಡುಗಡೆಯಾಗುವ ಸುದ್ದಿಯೇ ಇಲ್ಲ. 'ಶ್ಯಾಡೋ' ಟ್ರೇಲರ್ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಆ ಸಿನಿಮಾ ಕೂಡಾ ಇನ್ನೂ ಬಿಡುಗಡೆ ಆಗಿಲ್ಲ. ಈ ನಡುವೆ ವಿನೋದ್ ಪ್ರಭಾಕರ್ ಹೊಸ ಸಿನಿಮಾವೊಂದು ಸದ್ಯದಲ್ಲೇ ಆರಂಭವಾಗುತ್ತಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ...ರಾಜಸ್ಥಾನದಲ್ಲಿ ನಿರ್ದೇಶಕ ಪ್ರೇಮ್
ವಿನೋದ್ ನಟಿಸುತ್ತಿರುವ ಹೊಸ ಚಿತ್ರದ ಹೆಸರು 'ಲಂಕಾಸುರ'. ಲಾಕ್‍ಡೌನ್‍ಗೂ ಮುನ್ನವೇ ಈ ಚಿತ್ರದ ಫೋಟೋಶೂಟ್ ಆಗಿ ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಬೇಕು ಎಂದುಕೊಳ್ಳುವಷ್ಟರಲ್ಲಿ ಲಾಕ್‍ಡೌನ್ ಆರಂಭವಾಯ್ತು. ಇದೀಗ ಈ ಸಿನಿಮಾ ಚಿತ್ರೀಕರಣ ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ' ಲಂಕಾಸುರ' ಎಂದರೆ ರಾವಣ. ಇದು ರಾಮಾಯಣದ ಕಥೆಯಿರಬಹುದಾ ಎಂಬ ಪ್ರಶ್ನೆ ಬರಬಹುದು. ಇದು ಆಧುನಿಕ ರಾವಣನ ಕಥೆ ಹೊಂದಿದ್ದು ಚಿತ್ರದಲ್ಲಿ ನಾಯಕ ರಾವಣನ ವ್ಯಕ್ತಿತ್ವ ಹೊಂದಿರುತ್ತಾನಂತೆ. 'ಲಂಕಾಸುರ' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ಪಾರ್ವತಿ ಅರುಣ್ ಅಭಿನಯಿಸುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ 'ಮೂರ್ಕಲ್ ಎಸ್ಟೇಟ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಪ್ರಮೋದ್ ಕುಮಾರ್ ಈ ಲಂಕಾಸುರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವನ್ನು ಹೇಮಾವತಿ ಮುನಿಸ್ವಾಮಿ ಎನ್ನುವವರು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ ಹಾಗೂ ವಿಜೇತ್ ಕೃಷ್ಣ ಸಂಗೀತ ನೀಡುತ್ತಿದ್ದಾರೆ.