ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡ ಚಿತ್ರರಂಗದ ಕಾರ್ಮಿಕರನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು ಮತ್ತು ಸಂಕಷ್ಟದಲ್ಲಿರುವ ಚಲನಚಿತ್ರ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಚಿತ್ರರಂಗದ ಹಲವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಗಳನ್ನು ಸರ್ಕಾರ ಅದೆಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ.
ಈ ಕುರಿತಾಗಿ ಚಿತ್ರ ನಿರ್ದೇಶಕ ಮಂಸೋರೆ ಅವರೂ ಕೂಡಾ ಸರ್ಕಾರಕ್ಕೆ ಮನವಿ ಮಾಡಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆಂದು ಸರ್ಕಾರ ಒಂದಿಷ್ಟು ಹಣ ಮೀಸಲಿಟ್ಟಿತ್ತು. ಇಂತಹ ಸಮಯದಲ್ಲಿ ಚಿತ್ರೋತ್ಸವ ನಡೆಸುವುದು ಸಾಧ್ಯವಿಲ್ಲ. ಆದ್ದರಿಂದ ಈ ಬಾರಿಯ ಚಿತ್ರೋತ್ಸವವನ್ನು ಕ್ಯಾನ್ಸಲ್ ಮಾಡಿ. ಅದಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಕಷ್ಟದಲ್ಲಿರುವ ಕಾರ್ಮಿಕರಿಗೆ ವಿತರಿಸುವುದು ಹೆಚ್ಚು ಅರ್ಥಪೂರ್ಣ ಎಂದಿದ್ದಾರೆ.
ಕೋವಿಡ್ ಕಾರಣದಿಂದ ಈಗಾಗಲೇ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಮುಂದೆ ಜೀವನ ಹೇಗೋ ಎಂದು ನೂರಾರು ಕುಟುಂಬಗಳು ಕಂಗಾಲಾಗಿವೆ. ಇಂತಹ ಸಂದರ್ಭದಲ್ಲಿ ಚಿತ್ರೋತ್ಸವಕ್ಕಿಂತ ಜೀವಗಳನ್ನು ಕಾಪಾಡಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.
ಮಂಸೋರೆ ನಿರ್ದೇಶನದ `ಆ್ಯಕ್ಟ್ 1978' ಚಿತ್ರವು ಈ ಬಾರಿಯ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನವಾಗಬೇಕಿತ್ತು. ಹಾಗಿದ್ದರೂ, ತಮಗೆ ಚಿತ್ರೋತ್ಸವ ರದ್ದಾಗುವುದರ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಮಂಸೋರೆ ಹೇಳಿಕೊಂಡಿದ್ದಾರೆ.