ಬೆಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬ ನಾಪತ್ತೆ ಪ್ರಕರಣದಲ್ಲಿ ಮತ್ತೊಂದು ತಿರುವು ಪಡೆದುಕೊಂಡಿದೆ. ಮಹಿಳೆ ಮೇಲೆ ಹಲ್ಲೆ ಮಾಡುವಾಗ ರೇಖಾ ಮತ್ತು ಆಕೆಯ ಪುತ್ರ ಸ್ನೇಹಿತ್ ಬಿಡಿಸಲು ಹೋಗಿದ್ದರು ಎಂದು ಮನೆ ಒಡೆತಿ ಮಂಜುಳಾ ಪುರುಷೋತ್ತಮ್ ಹೇಳಿದ್ದಾರೆ.
ಇದಕ್ಕೂ ಮೊದಲು ಹಲ್ಲೆಗೊಳಗಾಗಿ ದೂರು ನೀಡಿದ್ದ ಮನೆ ಕೆಲಸದಾಕೆ ಅನುರಾಧ ಖುದ್ದು ಠಾಣೆಗೆ ಹಾಜರಾಗಿ ಎಫ್ಐಆರ್ನಲ್ಲಿ ಇಬ್ಬರ ಹೆಸರು ಕೈಬಿಡಲು ಮಾಡಿದ ಮನವಿಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ನಿರಾಕರಿಸಿದ್ದಾರೆ.
ನಿನ್ನೆ ತಡರಾತ್ರಿ ಠಾಣೆಗೆ ಬಂದು ಹಲ್ಲೆ ಪ್ರಕರಣದಲ್ಲಿ ರೇಖಾ ಜಗದೀಶ್ ಹಾಗೂ ಪುತ್ರ ಸ್ನೇಹಿತ್ ಹೆಸರು ಕೈ ಬಿಡಬೇಕೆಂದು ಮುಚ್ಚಿದ ಲಕೋಟೆಯಲ್ಲಿ ಮನವಿ ಪತ್ರ ನೀಡಿದ್ದಾರೆ. ಎಫ್ಐಆರ್ ದಾಖಲಾದ ಮೇಲೆ ಆರೋಪಿತರ ಹೆಸರು ಕೈಬಿಡಲು ಸಾಧ್ಯವಿಲ್ಲ. ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಏನೇ ಬದಲಾವಣೆ ಮಾಡುವುದಿದ್ದರೂ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಭೇಟಿ ನೀಡಿರುವ ಮನೆ ಒಡತಿ ಮಂಜುಳಾ ಪುರುಷೊತ್ತಮ್, ಹಲ್ಲೆ ಸಂಬಂಧ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ರೇಖಾ ಜಗದೀಶ್ ಹಾಗೂ ಸ್ನೇಹಿತ್ ಹೆಸರು ಕೈಬಿಡುವಂತೆ ಹೇಳಿದ್ದಾರೆ.
ದೊಡ್ಡವರಿಂದ ಒತ್ತಡ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಂಜುಳಾ, ಸಾಮಾನ್ಯ ವ್ಯಕ್ತಿಯಾಗಿ ಪೊಲೀಸ್ ಠಾಣೆಗೆ ಹೋಗಿದ್ದೆ. ಲಭ್ಯವಿದ್ದ ಸಿಸಿಟಿವಿ ಡಿಟೈಲ್ಸ್ ಕೊಟ್ಟಿದ್ದೇನೆ. ಈವರೆಗೂ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿಲ್ಲ. ದಿನ ಕಳೆದಂತೆ ಒತ್ತಡ ಹೆಚ್ಚಾಗುತ್ತಿದೆ. ದೊಡ್ಡವರಿಂದ ಕರೆಗಳು ಬರುತ್ತಿವೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ನಾನು ದೂರು ಕೊಡಿಸಿದ್ದೆ. ಈ ಬಗ್ಗೆ ನಿರ್ಮಾಪಕ ಜಗದೀಶ್ ನಡೆದಿರುವ ಘಟನೆ ದೊಡ್ಡದಾಗಿ ಬೆಳೆಸದಂತೆ ಮನವಿ ಮಾಡಿದ್ದಾರೆ.
ಹಲ್ಲೆ ವೇಳೆ ರೇಖಾ ಹಾಗೂ ಪುತ್ರ ಸ್ನೇಹಿತ್ ಜಗಳ ಬಿಡಿಸಲು ಹೋಗಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ಠಾಣೆಗೆ ಬಂದು ಸಿಸಿಟಿವಿ ದೃಶ್ಯಾವಳಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಂದಿದ್ದೇನೆ. ಗಲಾಟೆ ಬಳಿಕ ಎಲ್ಲವನ್ನು ಪೊಲೀಸರಿಗೆ ಕೊಟ್ಟಿದ್ದೇನೆ. ರೇಖಾ, ಸ್ನೇಹಿತ್ ಹೊಡೆದಿಲ್ಲ. ಬೌನ್ಸರ್ಗಳ ಮೇಲೆ ಕ್ರಮತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದೇನೆ ಎಂದರು.
ಪರಾರಿಯಾದ ಆರೋಪಿಗಳು
ವಿಶೇಷ ತಂಡ ರಚಿಸಿ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರಿಗೆ ತಲೆಮರೆಸಿಕೊಂಡಿರುವ ಆರೋಪಿಗಳು ಕೂದಲೆಳೆ ಅಂತರದಲ್ಲಿ ಪರಾರಿಯಾಗಿದ್ದಾರೆ. ಹಾಸನದಿಂದ ಸಕಲೇಶ್ವರ ಮಾರ್ಗ ಮಧ್ಯೆ ಪೊಲೀಸರು ಬೌನ್ಸರ್ಗಳ ಕಾರನ್ನು 25 ಕೀ.ಮೀ ಚೇಸ್ ಮಾಡಿದ್ದರು. ಆದರೆ, ಪೊಲೀಸರನ್ನು ಯಾಮಾರಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಮನೆ ಕೆಲಸದವಳ ಮೇಲೆ ಸ್ಯಾಂಡಲ್ವುಡ್ ಖ್ಯಾತ ನಿರ್ಮಾಪಕರ ಪುತ್ರನಿಂದ ಹಲ್ಲೆ: ಆರೋಪಿಗಳು ಪರಾರಿ