ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಮಹಾದೇವಿ ಧಾರಾವಾಹಿಯಲ್ಲಿ ದೇವಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಮಾನಸಿ ಜೋಶಿ ಇದೀಗ ಬೆಳ್ಳಿತೆರೆಯತ್ತ ಮಗದೊಮ್ಮೆ ಮುಖ ಮಾಡಿದ್ದಾರೆ. ಮಹಾದೇವಿಯ ದೇವಿಯ ನಂತರ ಶ್ರೀ ಧಾರಾವಾಹಿಯಲ್ಲಿ ಅಗಸಗಿತ್ತಿ ಆಗಿ ಅಭಿನಯಿಸಿದ್ದ ಮಾನಸಿ ಜೋಶಿ ಇದೀಗ ಎವಿಡೆನ್ಸ್ ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಕಮಾಲ್ ಮಾಡಲು ತಯಾರಾಗಿದ್ದಾರೆ.
ಬಾಲ್ಯದಿಂದಲೂ ಮಾನಸಿ ಜೋಶಿಗೆ ಕಲೆಯ ಬಗ್ಗೆ ವಿಶೇಷ ಒಲವು. ಸ್ನಾತಕೋತ್ತರ ಪದವಿ ಪಡೆದಿರುವ ಮಾನಸಿ ಜೋಶಿ ಆಯ್ದುಕೊಂಡಿದ್ದು ನಟನಾ ಕ್ಷೇತ್ರವನ್ನು. ನಟಿಯಾಗಿ ಕಾಣಿಸಿಕೊಳ್ಳಬೇಕು ಎಂದು ದೃಢನಿರ್ಧಾರ ಮಾಡಿದ ಮಾನಸಿ ಸೀದಾ ಹಾರಿದ್ದು ಮುಂಬೈಗೆ. ಮುಂಬೈಯ ಅನುಪಮ್ ಖೇರ್ ನಟನಾ ಶಾಲೆಗೆ ಹೋದ ಮಾನಸಿ ನಟನೆಯ ರೀತಿ ನೀತಿಗಳನ್ನು ಕಲಿತರು.
ನಟನೆಯ ಎಬಿಸಿಡಿ ಕಲಿತ ಬಳಿಕ ಮಹಾನಗರಿಗೆ ಮರಳಿದ ಆಕೆಗೆ ಅವಕಾಶ ಕಾದಿತ್ತು. ಸಿಂಪಲ್ ಸುನಿ ನಿರ್ದೇಶನದ ಬಹುಪರಾಕ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಆಕೆ ಕಾಲಿಟ್ಟರು. ಮುಂದೆ ಲಾಸ್ಟ್ ಬಸ್, ಕಿರಗೂರಿನ ಗಯ್ಯಾಳಿಗಳು, ದೇವರ ನಾಡಲ್ಲಿ, ಯಶೋಗಾಥೆ, ಹಜ್, ಕೌದಿ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಈಕೆ ನಟಿಸಿದ್ದರು. ಸಿನಿಮಾ ರಂಗದಲ್ಲಿ ಮಾನಸಿ ಜೋಶಿ ಸಕ್ರಿಯರಾಗಿದ್ದಾಗಲೇ ಮಹಾದೇವಿ ಧಾರಾವಾಹಿಯಿಂದ ಆಫರ್ ಬಂದಿತು. ಅಸ್ತು ಎಂದ ಮಾನಸಿ ದೇವಿಯಾಗಿ ಬದಲಾದರು.
ಮುಂದೆ ಶ್ರೀ ಧಾರಾವಾಹಿಯಲ್ಲಿ ನಟಿಸಿರುವ ಈಕೆ ಇದೀಗ ಎವಿಡೆನ್ಸ್ ಎನ್ನುವ ಸಿನಿಮಾದಲ್ಲಿ ತನಿಖಾಧಿಕಾರಿಯಾಗಿ ನಟಿಸುತ್ತಿದ್ದಾರೆ.ಆ ಮೂಲಕ ಮಗದೊಮ್ಮೆ ಹಿರಿತೆರೆಗೆ ತೆರಳಿದ್ದಾರೆ. ಮಾನಸಿ ಜೋಶಿ ಕೇವಲ ನಟಿ ಮಾತ್ರವಲ್ಲ, ಅದ್ಭುತ ನೃತ್ಯಗಾರ್ತಿಯೂ ಹೌದು. ಕಥಕ್ ನೃತ್ಯಗಾರ್ತಿಯಾಗಿರುವ ಆಕೆ ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲಿತಿದ್ದಾರೆ. ಮಾತ್ರವಲ್ಲ ಈಗಾಗಲೇ ಸುಮಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.